ಗದಗ: ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಲ್ಲಿಸಲು ಹೋದಾಗ, ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ರೈತರಿಗೆ ಏಕವಚನದಲ್ಲೇ ಆವಾಜ್ ಹಾಕಿ ದರ್ಪ ತೋರಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವೇಳೆ ರೈತರು ತಮ್ಮ ಅಳಲನ್ನು ತೋಡಿಕೊಂಡು, ಸರ್ಕಾರ ಮತ್ತು ಆಡಳಿತ ಯಂತ್ರ ನಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ನಾವು ಉಗ್ರ ಹೋರಾಟ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರೈತರ ಈ ಮಾತಿನಿಂದ ದಿಢೀರ್ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಹೋರಾಟ ಮಾಡೋದಾದ್ರೆ ಮಾಡ್ಕೊ, ಕೈ ಇಳಿಸು, ರೈತನಾಗಿದ್ರೆ ರೈತನಾಗಿರೋದು ಕಲ್ತ್ಕೋ ಎಂದು ಏಕವಚನದಲ್ಲೇ ಗದರಿಸಿದ್ದಾರೆ.
ಅಷ್ಟಕ್ಕೇ ನಿಲ್ಲದ ಜಿಲ್ಲಾಧಿಕಾರಿ, ರೈತರು ಬೆಳೆ ವಿಮೆ ಕುರಿತು ಪ್ರಶ್ನಿಸಿದ್ದಕ್ಕೆ, 2025-26ನೇ ಸಾಲಿನ ವಿಮೆ ಕೇಳ್ತಿದ್ದೀರಾ, ಸರ್ಕಾರ ಯಾರಿಗಾದರೂ ಕೊಟ್ಟಿದೆಯೇ? ನಾನು ಸರ್ಕಾರದ ಅಂಗವಲ್ಲ, ನೀವು ಹೋಗಿ ಸರ್ಕಾರವನ್ನೇ ಕೇಳಿ ಎಂದು ಅತ್ಯಂತ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಅಲ್ಲದೆ ನನ್ನ ಅಧಿಕಾರವನ್ನು ನನಗೆ ಹೇಳಿಕೊಡಬೇಡಿ, ನನಗಿರೋ ಅಧಿಕಾರ ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿ ಕೂತು ಪ್ರತಿಭಟನೆ ಮಾಡಲು ಅವಕಾಶವಿಲ್ಲ, ಮನವಿ ಕೊಡುವುದಿದ್ದರೆ ಕೊಡಿ, ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ದರ್ಪ ಪ್ರದರ್ಶಿಸಿದ್ದಾರೆ.ರೈತರ ಹಕ್ಕೊತ್ತಾಯವನ್ನು ಆಲಿಸುವ ಬದಲು ಅಧಿಕಾರದ ಸೊಕ್ಕಿನಿಂದ ವರ್ತಿಸಿದ ಜಿಲ್ಲಾಧಿಕಾರಿ, ಸ್ಥಳಕ್ಕೆ ಪೊಲೀಸರನ್ನು ಕರೆಸಿ ಮನವಿ ನೀಡಲು ಬಂದಿದ್ದ ರೈತರನ್ನು ಬಲವಂತವಾಗಿ ಕಚೇರಿಯಿಂದ ಹೊರಹಾಕಲು ಯತ್ನಿಸಿದ್ದಾರೆ. ಜಿಲ್ಲಾಧಿಕಾರಿ ಈ ಎಲ್ಲ ದರ್ಪದ ನಡವಳಿಕೆಯನ್ನು ರೈತರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.