ಗದಗ ಜಿಲ್ಲೆಗೆ ಕೈತಪ್ಪಿದ ಸಚಿವ ಸ್ಥಾನ, ಕಾಂಗ್ರೆಸ್‌ನಲ್ಲಿ ಅಸಮಾಧಾನ

KannadaprabhaNewsNetwork |  
Published : Aug 04, 2026, 01:45 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಒಂದೆಡೆ ಜಿ.ಎಸ್. ಪಾಟೀಲ ಅವರಿಗೆ ಸ್ಪೀಕರ್ ಹುದ್ದೆ ದೊರೆತಿರುವುದು ಅವರ ಬೆಂಬಲಿಗರಲ್ಲಿ ಸಂತಸ ಮೂಡಿಸಿದರೆ, ಮತ್ತೊಂದೆಡೆ ಸಚಿವ ಸ್ಥಾನ ಕೈತಪ್ಪಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಚ್.ಕೆ. ಪಾಟೀಲ ಅವರ ಅಭಿಮಾನಿಗಳೂ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ನಿರಾಶರಾಗಿದ್ದಾರೆ.

ವಿಶೇಷ ವರದಿ

ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ಮತ್ತು ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ ಅವರ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದ್ದರೂ, ಕೊನೆ ಕ್ಷಣದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಿಗದೇ ಹೋಗಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.

ರಾಜ್ಯದ ರಾಜಕೀಯ ವಲಯದಲ್ಲಿ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸಚಿವ ಸ್ಥಾನ ದೊರೆಯದಿದ್ದರೆ ವಿಧಾನಸಭೆಯ ಸ್ಪೀಕರ್ ಹುದ್ದೆ ನೀಡುವ ಸಾಧ್ಯತೆಯೂ ಇತ್ತು. ಆದರೆ, ಅಂತಿಮವಾಗಿ ಸ್ಪೀಕರ್ ಹುದ್ದೆ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರ ಪಾಲಾಗಿದ್ದು, ಮೊದಲ ಬಾರಿಗೆ ಸಚಿವರಾಗಬೇಕು ಎಂಬ ಕನಸು ಕಂಡಿದ್ದ ಅವರ ಬೆಂಬಲಿಗರಲ್ಲಿ ತೀವ್ರ ಬೇಸರ ಉಂಟಾಗಿದೆ.

ಎಚ್.ಕೆ. ಪಾಟೀಲರ ನಿರೀಕ್ಷೆ ಹುಸಿ: ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಾಗಿರುವ ಎಚ್.ಕೆ. ಪಾಟೀಲ ಹಾಗೂ ಜಿ.ಎಸ್. ಪಾಟೀಲ ಇಬ್ಬರು ಹಲವು ದಶಕಗಳಿಂದ ಪಕ್ಷ ಸಂಘಟನೆಗೆ ಸೇವೆ ಸಲ್ಲಿಸಿದ್ದಾರೆ. ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಅವರಿಗೆ ಅವಕಾಶ ಸಿಗದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿದೆ. ಗದಗ ಮತ್ತು ರೋಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೂ, ನರಗುಂದ ಮತ್ತು ಶಿರಹಟ್ಟಿ ಕ್ಷೇತ್ರಗಳಲ್ಲಿ ಪಕ್ಷ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಒಂದೇ ಜಿಲ್ಲೆಯಿಂದ ಇಬ್ಬರಿಗೆ ಸಚಿವ ಸ್ಥಾನ ನೀಡುವುದು ಕಷ್ಟ ಎನ್ನುವ ಲೆಕ್ಕಾಚಾರದ ಮಧ್ಯೆಯೂ ಪಕ್ಕದ ಕೊಪ್ಪಳ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಜಿಲ್ಲೆಗೆ ಮತ್ತೊಮ್ಮೆ ಸ್ವಂತ ಉಸ್ತುವಾರಿ ಸಚಿವರಿಲ್ಲದಂತಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಅನುದಾನ ಹಂಚಿಕೆ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಜಿಲ್ಲೆಯ ಧ್ವನಿ ದುರ್ಬಲವಾಗುವ ಆತಂಕ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳ ಸಚಿವರನ್ನೇ ಗದಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದು ಅನಿವಾರ್ಯವಾಗುವ ಸಾಧ್ಯತೆ ಇದೆ.

ಕಾರ್ಯಕರ್ತರಲ್ಲಿ ಅಸಮಾಧಾನ: ಒಂದೆಡೆ ಜಿ.ಎಸ್. ಪಾಟೀಲ ಅವರಿಗೆ ಸ್ಪೀಕರ್ ಹುದ್ದೆ ದೊರೆತಿರುವುದು ಅವರ ಬೆಂಬಲಿಗರಲ್ಲಿ ಸಂತಸ ಮೂಡಿಸಿದರೆ, ಮತ್ತೊಂದೆಡೆ ಸಚಿವ ಸ್ಥಾನ ಕೈತಪ್ಪಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಚ್.ಕೆ. ಪಾಟೀಲ ಅವರ ಅಭಿಮಾನಿಗಳೂ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ನಿರಾಶರಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಗದಗ ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಸಮೀಕರಣಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವ ಅಸಮಾಧಾನವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಹರಿಕಾರ ರಾಯರಡ್ಡಿಗೆ ಮಂತ್ರಿಪಟ್ಟ
ಕೊಪ್ಪಳ ಜಿಲ್ಲೆಗೆ ಡಬಲ್ ಧಮಾಕಾ