ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ತೋಂಟದ ಸಿದ್ಧರಾಮ ಶ್ರೀಗಳು

KannadaprabhaNewsNetwork |  
Published : Nov 05, 2026, 02:15 AM IST
ಶಿವಾನುಭವ ಕಾರ್ಯಕ್ರಮದಲ್ಲಿ ವೀಣಾ ಪಾಟೀಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯ, ಕಲೆ, ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಗದಗ ಜಿಲ್ಲೆಯು ನೀಡಿರುವ ಕೊಡುಗೆ ಅನನ್ಯ ಹಾಗೂ ಅಪಾರ

ಕನ್ನಡಪ್ರಭ ವಾರ್ತೆ ಗದಗ

ಕನ್ನಡ ಸಾಹಿತ್ಯ, ಕಲೆ, ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಗದಗ ಜಿಲ್ಲೆಯು ನೀಡಿರುವ ಕೊಡುಗೆ ಅನನ್ಯ ಹಾಗೂ ಅಪಾರ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ ನಗರದ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಲಾಗಿದ್ದ 2822ನೇ ಶಿವಾನುಭವ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸುಪ್ರಸಿದ್ಧ ಕವಿಗಳಾದ ಕುಮಾರವ್ಯಾಸ, ಚಾಮರಸ ಮುಂತಾದ ಮಹನೀಯರು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು, ಅನ್ನದಾನಪ್ಪ ದೊಡ್ಡಮೇಟಿ, ನಾರಾಯಣರಾವ್ ಹುಯಿಲಗೋಳ ಮೊದಲಾದವರು ಅಪಾರ ತ್ಯಾಗ ಮಾಡಿದ್ದಾರೆ. ಗೋಕಾಕ ಚಳವಳಿಯ ನೇತೃತ್ವ ವಹಿಸಿದ್ದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೋರಾಟ ಸದಾ ಸ್ಮರಣೀಯ.

ಇದೇ ವೇಳೆ, ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆಯ ಭರಾಟೆಯಲ್ಲಿ ಇಂದಿನ ಯುವಜನತೆ ಪುಸ್ತಕ ಓದುವ ಸಂಸ್ಕೃತಿಯಿಂದ ದೂರವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಪ್ರತಿಯೊಬ್ಬ ಕನ್ನಡಿಗನೂ ಭಾಷಾಭಿಮಾನವನ್ನು ಕೇವಲ ಮಾತಿನಲ್ಲಿ ಸೀಮಿತಗೊಳಿಸದೆ, ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ. ಇಬ್ರಾಹಿಂ ಸೌದಾಗರ ಮಾತನಾಡಿ, ಕದಂಬರ ಕಾಲದಿಂದ ಹಿಡಿದು ಕರ್ನಾಟಕ ಏಕೀಕರಣದವರೆಗಿನ ರೋಮಾಂಚನಕಾರಿ ಇತಿಹಾಸದ ಮೈಲಿಗಲ್ಲುಗಳನ್ನು ವಿವರಿಸಿದರು. ವೀಣಾ ಪಾಟೀಲ ಮಾತನಾಡಿದರು.

ಇದೇ ಸಂದರ್ಭ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ತಮ್ಮ ಮನೆಯನ್ನೇ ಗ್ರಂಥಾಲಯವನ್ನಾಗಿ ರೂಪಿಸಿರುವ ಅಣ್ಣಿಗೇರಿಯ ಪತ್ರೇಶ್ವರ ಸಿ. ನವಲಗುಂದ ಅವರ ಸೇವೆಯನ್ನು ಶ್ಲಾಘಿಸಿ, ಪೂಜ್ಯ ಶ್ರೀಗಳು ಅವರಿಗೆ ಗೌರವ ಸನ್ಮಾನ ನೆರವೇರಿಸಿದರು. ನಂತರ ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪ್ರೌಢಶಾಲೆಯ ಮಕ್ಕಳಿಂದ ಕಲ್ಯಾಣದ ಕ್ರಾಂತಿಯ ಕಿಡಿ ರೂಪಕ ಜರುಗಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ವೇದಿಕೆಯಲ್ಲಿ ಎಸ್.ಎಸ್. ಹರ್ಲಾಪುರ, ಬಸಪ್ಪ ಪಲ್ಲೇದ, ಗಂಗಾಧರ ಹಿರೇಮಠ, ದಾನಯ್ಯ ಗಣಾಚಾರಿ, ಡಾ. ರಮೇಶ ಕಲ್ಲನಗೌಡರ, ಡಾ. ಆದೇಶ ಅಂಗಡಿ, ಸೋಮು ಪುರಾಣಿಕ, ಕೆ.ಎಸ್. ಕೋರಿಮಠ, ಎಸ್.ಐ. ಪಟ್ಟೇದ, ಡಾ. ಪ್ರಭು ಗಂಜಿಹಾಳ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಶಿವಾನಂದ ಕೌಜಲಗಿ, ಸಾಹಿತಿ ಜಿನದತ್ತ ದೇಸಾಯಿ, ಸಿದ್ದಯ್ಯ ಹಿರೇಮಠ ಹಾಗೂ ಸರೋಜಿನಿ ಬಳೊಳ್ಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕನ್ನಡ ಭಾಷೆ ಶ್ರೀಮಂತಗೊಳ್ಳಬೇಕಾದರೆ ಪ್ರತಿಯೊಬ್ಬ ಕನ್ನಡಿಗನಲ್ಲೂ ನಿಷ್ಠೆ ಮತ್ತು ಅಭಿಮಾನ ಇರಬೇಕು. ಕೇವಲ ಹೆಸರಾಯಿತು ಕರ್ನಾಟಕ ಎಂದರಷ್ಟೇ ಸಾಲದು, ಉಸಿರಾಗಲಿ ಕನ್ನಡ ಎಂಬ ಮಾತನ್ನು ನಾವೆಲ್ಲರೂ ಬದುಕಿನಲ್ಲಿ ಪಾಲಿಸಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಮೊಬೈಲ್ ವ್ಯಾಮೋಹ ಕಡಿಮೆ ಮಾಡಿ ಪುಸ್ತಕಗಳನ್ನು ಓದುವ ಸಂಸ್ಕೃತಿ ರೂಢಿಸಿಕೊಳ್ಳುವುದು ಅತ್ಯಗತ್ಯ.

ಡಾ. ತೋಂಟದ ಸಿದ್ಧರಾಮ ಶ್ರೀಗಳು, ತೋಂಟದಾರ್ಯ ಮಠ, ಗದಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ