ಗಡಾಯಿಕಲ್ಲು ಚಾರಣ, ಆಯ್ದ ಜಲಪಾತ ವೀಕ್ಷಣೆಗೆ ಮತ್ತೆ ಅವಕಾಶ

KannadaprabhaNewsNetwork |  
Published : Jun 12, 2025, 04:08 AM IST
ಚಾರಣ | Kannada Prabha

ಸಾರಾಂಶ

ಜೂ.7ರಿಂದ ಮತ್ತೆ ಪ್ರವಾಸಿಗರಿಗೆ ಬೆಳ್ತಂಗಡಿ ತಾಲೂಕಿನ (ನರಸಿಂಹ ಗಡ) ಗಡಾಯಿ ಕಲ್ಲು, ಬೊಳ್ಳೆ, ಕಡಮ ಗುಂಡಿ (ದಿಡುಪೆ) ಜಲಪಾತಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬಂಡಾಜೆ ಜಲಪಾತದ ನಿರ್ಬಂಧ ಮುಂದುವರಿದಿದೆ

ಮಳೆ ತೀವ್ರತೆ ಇಳಿಕೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಈ ಸಡಿಲಿಕೆ ಜಾರಿಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಚಾರಣ ಸ್ಥಳವಾದ ನರಸಿಂಹ ಗಡ ( ಗಡಾಯಿಕಲ್ಲು) ಹಾಗು ಕೆಲವು ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆ ಮತ್ತೆ ಅವಕಾಶ ನೀಡಿದೆ.

ಕಳೆದ ತಿಂಗಳು ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾದ ಹಿನ್ನೆಲೆಯಲ್ಲಿ ಮೇ 31 ರಿಂದ ಜಲಪಾತಗಳ ವೀಕ್ಷಣೆ ಹಾಗೂ ಚಾರಣ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಬಳಿಕ ಜೂನ್ ಪ್ರಥಮ ವಾರದಲ್ಲಿ ಮಳೆ ಇಳಿಕೆಯಾಗಿ ಬಿಸಿಲಿನ ವಾತಾವರಣ ಮೂಡಿದ ಕಾರಣ ಜಲಪಾತ ಹಾಗೂ ಚಾರಣ ಸ್ಥಳಗಳು ಅಪಾಯಕಾರಿ ಸ್ಥಿತಿಯಿಂದ ಯಥಾ ಸ್ಥಿತಿಗೆ ಮರಳಿದ ಕಾರಣ ಜೂ.7ರಿಂದ ಮತ್ತೆ ಪ್ರವಾಸಿಗರಿಗೆ (ನರಸಿಂಹ ಗಡ) ಗಡಾಯಿ ಕಲ್ಲು, ಬೊಳ್ಳೆ, ಕಡಮ ಗುಂಡಿ (ದಿಡುಪೆ) ಜಲಪಾತಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬಂಡಾಜೆ ಜಲಪಾತದ ನಿರ್ಬಂಧ ಮುಂದುವರಿದಿದೆ. ಪ್ರಸ್ತುತ ಜಲಪಾತಗಳು ಉತ್ತಮ ಮಟ್ಟದ ನೀರಿನೊಂದಿಗೆ ಧುಮ್ಮಿಕ್ಕುತ್ತಿದ್ದು, ಇವುಗಳ ವೀಕ್ಷಣೆಗೆ ಇದು ಸಕಾಲವಾಗಿದೆ. ಮುಂದಿನ ದಿನಗಳಲ್ಲಿ ವಿಪರೀತ ಮಳೆ, ರೆಡ್ ಅಲರ್ಟ್ ಘೋಷಿಸಲ್ಪಟ್ಟರೆ ಮತ್ತೆ ಅನಿರ್ದಿಷ್ಟಾವಧಿ ಕಾಲ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ.

ಮಲವಂತಿಗೆ ಜಲಪಾತಗಳ ಊರು. ಇಲ್ಲಿ ಎರ್ಮಾಯಿ, ಕಡಮಗುಂಡಿ, ಎಳನೀರು, ಬಂಗಾರಪಲ್ಕೆ ಜತೆಗೆ ಅನೇಕ ಸಣ್ಣ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ

ಜಾಗ್ರತೆ ಅಗತ್ಯ:

ಈ ಜಲಪಾತಗಳ ಪರಿಸರ ಅಪಾಯಕಾರಿಯಾಗಿವೆ. ಜಲಪಾತಗಳ ವ್ಯಾಪ್ತಿಯಲ್ಲಿ ಜಾರುವ ಬಂಡೆಗಳು, ಆಳವಾದ ಹೊಂಡಗಳು ಇವೆ. ಅನಗತ್ಯವಾಗಿ ನೀರಿಗೆ ಇಳಿಯುವುದು, ಕಡಿದಾದ ಜಾಗಗಳನ್ನು ಹತ್ತುವುದು ಅಪಾಯಕ್ಕೆ ಆಹ್ವಾನ. ಇದಕ್ಕೆ ಪೂರಕವೆಂಬಂತೆ ಜಲಪಾತಗಳ ಪ್ರದೇಶಗಳಲ್ಲಿ ಹಲವಾರು ಅವಘಡಗಳು ಸಂಭವಿಸಿವೆ.

ಜಲಪಾತಗಳು ಕಾಡಿನ ದಾರಿಯಲ್ಲಿದ್ದು, ಕಾಡಾನೆಗಳು ತಿರುಗಾಡುವ ಪ್ರದೇಶವಾಗಿದೆ. ಕೆಲವೊಮ್ಮೆ ಚಿರತೆಗಳು, ಅಪಾಯಕಾರಿ ಹಾವುಗಳ ಓಡಾಟ ದಾರಿಯುದ್ದಕ್ಕೂ ಇರುತ್ತದೆ. ಕಾಡು ದಾರಿಗಳಲ್ಲಿ ಕ್ರಮಿಸುವಾಗ ಬೆಂಕಿ ಹಾಕುವುದು, ಅಡುಗೆ, ಧೂಮಪಾನ ಇತ್ಯಾದಿಗಳಿಂದ ಕಾಡ್ಗಿಚ್ಚು ಹರಡಲು ಕಾರಣವಾಗಬಹುದು. ಸುಂದರ ಪರಿಸರದ ಅಂದ ಕಾಪಾಡಲು ಅಲ್ಲಲ್ಲಿ ಕಸ ಎಸೆಯುವುದು, ತ್ಯಾಜ್ಯ ಸುರಿಯುವುದು ಮಾಡಬಾರದು. ಈ ಜಲಪಾತಗಳ ನೀರನ್ನು ಕೃಷಿ ಹಾಗೂ ದಿನನಿತ್ಯದ ಬಳಕೆಗೆ ಉಪಯೋಗಿಸುವ ಕಾರಣ ಅದನ್ನು ಕಲುಷಿತಗೊಳಿಸಬಾರದು.

ಜಲಪಾತಗಳ ಪ್ರದೇಶದಲ್ಲಿ ಯಾವುದೇ ಮುಂಜಾಗ್ರತೆ ವ್ಯವಸ್ಥೆ, ಕುಡಿಯುವ ನೀರು, ತಿಂಡಿ ಇತ್ಯಾದಿ ಅಗತ್ಯ ವಸ್ತುಗಳ ಲಭ್ಯತೆ ಇರುವುದಿಲ್ಲ. ಯಾವುದೇ ಅಪಾಯ ಉಂಟಾದರೂ ಹಲವು ಕಿ.ಮೀ. ಹೊತ್ತುಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ. ರಸ್ತೆಗಳಿಲ್ಲದ ಕಾರಣ ಕೆಲವೊಮ್ಮೆ ಗಿಡಗಂಟಿಗಳನ್ನು ತೆರವುಗೊಳಿಸುತ್ತಾ ಮುಂದೆ ಸಾಗಬೇಕು. ಇದರಿಂದ ಜಲಪಾತಗಳಿಗೆ ತೆರಳುವ ಮಂದಿ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.

ವನ್ಯಜೀವಿ ವಿಭಾಗ:

ಜಲಪಾತಗಳು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸುಪರ್ದಿಗೆ ಬರುತ್ತವೆ. ಇಲ್ಲಿಗೆ ಪ್ರವೇಶ ಟಿಕೆಟ್‌ ನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮೂಲಕ ಮಾಡಿಸಬೇಕು.

......................ಗಡಾಯಿಕಲ್ಲಿಗೂ ಪ್ರವೇಶಾವಕಾಶಐತಿಹಾಸಿಕ ಚಾರಣ ಸ್ಥಳವಾದ ಗಡಾಯಿಕಲ್ಲು ವೀಕ್ಷಣೆಗೆ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಸಮುದ್ರಮಟ್ಟದಿಂದ 1788ಅಡಿ ಎತ್ತರದಲ್ಲಿರುವ ಈ ಕೋಟೆ ತಾಲೂಕಿನ ನಡ ಗ್ರಾಮದಲ್ಲಿದೆ.ಈ ಕೋಟೆ ತುದಿಯನ್ನು ತಲುಪಬೇಕಾದರೆ 2800ಕ್ಕೂ ಅಧಿಕ ಕಡಿದಾದ ಮೆಟ್ಟಿಲುಗಳನ್ನು ಏರಬೇಕು. ಸುತ್ತಲು ಹಸಿರು ಪರಿಸರ, ಸುಂದರ ಕೆರೆ, ಹಳೆ ಕಾಲದ ಫಿರಂಗಿ, ಕೋಟೆ ಹಾಗೂ ಇನ್ನಿತರ ಆಕರ್ಷಣೆಗಳನ್ನು ಹೊಂದಿದೆ. ಬಂಡೆಗಳು ವಿಪರೀತ ಜಾರುವ ಕಾರಣ ಪ್ರವೇಶಾವಕಾಶಕ್ಕೆ ನಿರ್ಬಂಧ ಹೇರಲಾಗಿತ್ತು. ಮುಂದಿನ ದಿನಗಳಲ್ಲಿ ಜೋರಾದ ಮಳೆ ಸುರಿದರೆ ಪ್ರವೇಶ ನಿಷೇಧ ಹೇರುವ ಸಾಧ್ಯತೆ ಇದೆ.................ತಾಲೂಕಿನ ಜಲಪಾತಗಳ ವೀಕ್ಷಣೆಗೆ ಹೇರಲಾಗಿದ್ದ ನಿರ್ಬಂಧ ಈಗಾಗಲೇ ಹಿಂಪಡೆಯಲಾಗಿದೆ. ಗಡಾಯಿಕಲ್ಲು ಸಹಿತ ಇವುಗಳ ಪ್ರವೇಶಕ್ಕೆ ಆನ್‌ ಲೈನ್‌ ಮೂಲಕ ಟಿಕೆಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಬಂಗಾರಪಲ್ಕೆ, ಬಂಡಾಜೆ ಜಲಪಾತಗಳ ವೀಕ್ಷಣೆಗೆ ನಿರ್ಬಂಧ ಮುಂದುವರಿದಿದೆ. ಜಲಪಾತ ಹಾಗೂ ಅವುಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯುವುದು, ಇನ್ನಿತರ ಅನಗತ್ಯ ಚಟುವಟಿಕೆ ನಡೆಸುವುದು ದಂಡ ವಿಧಿಸಬಹುದಾದ ಅಪರಾಧವಾಗಿದೆ.

-ಶರ್ಮಿಷ್ಠಾ, ಆರ್‌ಎಫ್‌ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ