ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಉತ್ತಮ ವಿಚಾರ ಬೋಧನೆ ಅಗತ್ಯ: ಬೇಬಿ ಎಂ ಮನಿಯಾಟ್ ಅಭಿಮತ

KannadaprabhaNewsNetwork |  
Published : Jun 12, 2025, 04:01 AM IST
ನರಸಿಂಹರಾಜಪುರ ತಾಲೂಕಿನ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ  ನಿವೃತ್ತಗೊಂಡ  ಉಪನ್ಯಾಸಕ ಕಮಲ್ ಬಾಬು ಅವರನ್ನು ಅವರ ಶಿಷ್ಯ ವೃಂದದವರು ಅಭಿನಂದಿಸಿದರು.ಲೇಖಕ ಬೇಬಿ ಎಂ ಮನಿಯಾಟ್, ಕೊಪ್ಪದ ನ್ಯಾಯವಾಧಿ ಸುದೀರ್ ಕುಮಾರ್ ಮುರೊಳ್ಳಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ವಿಚಾರ ಬೋಧಿಸುವುದರಿಂದ ಮೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಲೇಖಕ ಬೇಬಿ.ಎಂ.ಮನಿಯಾಟ್ ಹೇಳಿದರು.

ನಿವೃತ್ತ ಕಮಲ್ ಬಾಬುಗೆ ಶಿಷ್ಯರಿಂದ ಅಭಿನಂದನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪು

ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ವಿಚಾರ ಬೋಧಿಸುವುದರಿಂದ ಮೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಲೇಖಕ ಬೇಬಿ.ಎಂ.ಮನಿಯಾಟ್ ಹೇಳಿದರು.

ನಿವೃತ್ತ ಉಪನ್ಯಾಸಕ ಕಮಲ್ ಬಾಬು ಅವರಿಗೆ ಶಿಷ್ಯವೃಂದದಿಂದ ತಾಲೂಕಿನ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮತ್ತು ವಿದ್ಯಾರ್ಥಿ ಒಂದು ವಿಶ್ಲೇಷಣೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪದವಿ ಪೂರ್ವ ಹಂತದಲ್ಲಿ ಹದಿಹರೆಯದಲ್ಲಿರುವ ಯುವ ಜನಾಂಗ ದಾರಿ ತಪ್ಪುವ ಸಾಧ್ಯತೆಯಿದ್ದು ಇಂತಹ ಸಂದರ್ಭದಲ್ಲಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಅವಶ್ಯಕತೆಯಿದೆ ಎಂದರು.

ಉಪನ್ಯಾಸಕರ ಚಿಂತನೆ, ನಡವಳಿಕೆ ಸಹ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತವೆ. ದ್ರೋಣಾಚಾರ್ಯರಂತಹ ಗುರುಗಳು ಇರುತ್ತಾರೆ. ಏಕಲವ್ಯನಂತಹ ಶಿಕ್ಷಕರು ಸಹ ಇರುತ್ತಾರೆ. ಮಾನವೀಯ ಮೌಲ್ಯಗಳು, ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಶಿಕ್ಷಕರು ಆದರ್ಶ ಪ್ರಾಯರಾಗಿರುತ್ತಾರೆ. ಆದರ್ಶ ಶಿಕ್ಷಕರಲ್ಲಿ ಕಮಲ್ ಬಾಬು ಸಹ ಒಬ್ಬರು. 36 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರೂ ತಮ್ಮ ವಿದ್ಯಾರ್ಥಿಗಳ ಮೇಲೆ ಎಂತಹ ಅದ್ಭುತ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಈ ಅಭಿನಂದನಾ ಸಮಾರಂಭವೇ ಸಾಕ್ಷಿ ಎಂದರು.ಕೊಪ್ಪದ ನ್ಯಾಯವಾದಿ ಸುಧೀರ್‌ಕುಮಾರ್‌ ಮುರೊಳ್ಳಿ ಮಾತನಾಡಿ, ಭಾರತದಲ್ಲಿ ತಾಯಿಗೆ ಸಮಾನವಾದ ಸ್ಥಾನ ಶಿಕ್ಷಕರಿಗೆ ನೀಡಲಾಗಿದೆ. ಕಮಲ್ ಬಾಬು ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ನಂತರದಲ್ಲಿ ಹಲವು ಗುರುತರ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮ, ಸಮಾಜ ನಿರ್ಮಾಣಕ್ಕೆ ತುಡಿತವಿರುವ ವ್ಯಕ್ತಿತ್ವ ಕಮಲ್ ಬಾಬು ಅವರಲ್ಲಿದೆ. ವೃತ್ತಿ ಬದ್ಧತೆಯಿಂದ ಅಪಾರ ಶಿಷ್ಯವೃಂದ ಹೊಂದಿದ್ದಾರೆ. ವೃತ್ತಿಯೊಂದಿಗೆ ಕುಟುಂಬಕ್ಕೂ ಆದ್ಯತೆ ನೀಡಿದ್ದಾರೆ. ವೃತ್ತಿಯಿಂದ ನಿವೃತ್ತರಾಗಿದ್ದರೂ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ಕೊಳ್ಳಬೇಕು ಎಂದರು.ಜಿಪಂ ಮಾಜಿ ಸದಸ್ಯ ಪಿ.ಜೆ.ಅಂಟೋಣಿ ಮಾತನಾಡಿ, ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠದಾನ ವಿದ್ಯಾದಾನ. ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯಿಂದ ಗುರು ಶಿಷ್ಯರ ಸಂಬಂಧ ಯಾಂತ್ರೀಕೃತವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಜಾತಿ,ಧರ್ಮ, ಭಾಷೆ, ರೂಢಿ, ಸಂಪ್ರದಾಯ, ರಾಜಕೀಯ ವ್ಯವಸ್ಥೆಯಿಂದ ಯುವಜನಾಂಗದಲ್ಲಿ ಭಾವನೆ ಕೆರಳಿಸುವ ಕೆಲಸವಾಗುತ್ತಿದೆ. ಶಿಕ್ಷಕರಾದವರು ಜ್ಞಾನದ ಮೂಲಕ ವೈಜ್ಞಾನಿಕ, ವೈಚಾರಿಕ, ಮನೋಭಾವನೆ ಬೆಳೆಸುವ ಮೂಲಕ ಮಾನವ ಧರ್ಮ ಎತ್ತಿ ಹಿಡಿದು ಭಾವನೆಗಳನ್ನು ಅರಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಅಭಿನಂದನೆ ಸ್ವೀಕರಿಸಿ ನಿವೃತ್ತ ಉಪನ್ಯಾಸಕ ಕಮಲ್‌ಬಾಬು ಮಾತನಾಡಿ, ಪ್ರಗತಿಪರ, ಎಡಪಂಥೀಯ ಚಿಂತನೆ ಹೊಂದಿದ್ದ ನಾನು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸಮಾಜಶಾಸ್ತ್ರ ಪಾಠದ ಬೋಧನೆ ಜತೆಗೆ ವೈಚಾರಿ, ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ ಮಾಡಿದ್ದೇನೆ. ಇದು ನನ್ನ ವೃತ್ತಿ ಜೀವನಕ್ಕೆ ಮಾರಕವಾಗಿಯೂ ಪರಿಣಮಿಸಿತು. ಉಪನ್ಯಾಸಕನಿಂದ ಪ್ರಾಚಾರ್ಯನಾಗಿ ಬಡ್ತಿ ಪಡೆದಾಗಲೇ ನಿವೃತ್ತಿಯಾದಂತಾಯಿತು. ಜಾತಿ, ಧರ್ಮಗಳ ಕಂದಕ ಬಾರ ದಂತೆ ಸಮಾಜ ಕಟ್ಟುವ ಕೆಲಸ ಮಾಡಬೇಕಾಗಿದೆ. ಶಿಷ್ಯವೃಂದ ನೀಡಿದ ಅಭಿನಂದನೆ ನನ್ನ ವೃತ್ತಿ ಜೀವನದ ಸಾರ್ಥಕತೆ ಎಂದರು.

ವಿದ್ಯಾರ್ಥಿಗಳಾದ ರತ್ನಾಕರ್, ಎಲ್ದೋ ಹೊನ್ನೆಕೂಡಿಗೆ, ಅರುಣ್, ಜೈಸಿ ಜಾರ್ಜ್, ಬಿಂದು ಜೋಸೆಫ್, ಅನಿಷಾ,ಸಾಹಿತ್ಯ, ಎಲ್ದೋ, ಅಬ್ಧುಲ್ ವಹಾಬ್ ಇದ್ದರು. ವಿವಿಧ ಸಂಘ ಸಂಸ್ಥೆಯವರು, ವಿವಿಧ ಕಾಲೇಜಿನ ಉಪನ್ಯಾಸಕರು ಕಮಲ್ ಬಾಬುಗೆ ಅಭಿನಂದಿಸಿದರು. ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಉಮೇಶ್, ಸೂನಾ ಮ್ಯಾಥ್ಯೂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ಬಿಡಿ ಪುಸ್ತಕ ಹಿಡಿ’ ಅಭಿಯಾನ
ಬಾಗಲಕೋಟೆ ಗಲಭೆಗೆ ಕೇಸರಿ ಪಡೆ ಗರಂ