ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಂಡ್ಯ ಜಿಲ್ಲೆಯ ಐತಿಹಾಸಿಕ ಗಗನಚುಕ್ಕಿ ಜಲಪಾತದ ಸೊಬಗನ್ನು ಆನಂದಿಸುವ ಜೊತೆಗೆ ಪ್ರವಾಸಿ ತಾಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಿದೆ ಎಂದು ಶಿಕ್ಷಣ ಉನ್ನತ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ತಾಲೂಕಿನ ಶಿವನಸಮುದ್ರದ ಗಗನಚುಕ್ಕಿಯಲ್ಲಿ ನಡೆದ ಜಲಪಾತೋತ್ಸದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿದೇಶದಲ್ಲಿ ಕೃತಕವಾಗಿ ಸೃಷ್ಟಿಸಿರುವ ಜಲಪಾತಕ್ಕಿಂತ ಪ್ರಕೃತಿಯಲ್ಲಿ ಮೂಡಿ ಬಂದಿರುವ ಗಗನಚುಕ್ಕಿ ಜಲಪಾತ ಅದ್ಭುತವಾಗಿದೆ ಎಂದರು.
ಕಾವೇರಿ ನದಿ ಸುಂದರ ಸೊಬಗನ್ನು ಆನಂದಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ಗಗನಚುಕ್ಕಿ ಪ್ರಕೃತಿ ಸೌಂದರ್ಯದೊಂದಿಗೆ ಪ್ರೇಕ್ಷಣಿಯ ಪ್ರವಾಸೋದ್ಯಮವಾಗಿ ಮಾಡಬೇಕಿದೆ. ಈಗಾಗಲೇ ಈ ಪ್ರವಾಸಿ ತಾಣವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಿತ್ತು. ಮುಂದಾದರೂ ಈ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣಲಿ ಎಂದು ಹೇಳಿದರು.ಜಲಪಾತೋತ್ಸವದ 2ನೇ ದಿನವಾದ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಜಿಲ್ಲೆ, ರಾಜ್ಯ ಸೇರಿದಂತೆ ವಿದೇಶದಿಂದಲೂ ಪ್ರವಾಸಿಗರು ಕುಟುಂಬ ಸಮೇತ ಆಗಮಿಸಿ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡರು.
ವಿದ್ಯುತ್ ದೀಪ ಹಾಗೂ ಲೇಸರ್ ಕಿರಣಗಳನ್ನು ಅಳವಡಿಸಿದ ಪರಿಣಾಮ ಬಣ್ಣದ ಚಿತ್ತರಕ್ಕೆ ಮನಸೋತ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಫೋಟೊವನ್ನು ಕ್ಲಿಕ್ಕಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಸವಿಯನ್ನು ಪಡೆದರು.ಸರಿಗಮಪ ತಂಡದಿಂದ ಸಂಗೀತ ಸಂಜೆ, ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಕಾರ್ಯಕ್ರಮ, ರವಿ ಬಸ್ರೂರ್ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ಮನುಸೂರೆಗೊಳ್ಳುವಂತೆ ಮಾಡಿತು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ನಗರದ ಶಾಸಕ ರವಿಶಂಕರ್, ಮಂಡ್ಯದ ಶಾಸಕ ಪಿ.ರವಿಕುಮಾರ್ , ವಿಧಾನಪರಿಷತ್ ಸದಸ್ಯ ಸುಧಾಮ್ ದಾಸ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಅರುಣ್ ಚಕ್ರವರ್ತಿ, ನಂಜುಂಡಸ್ವಾಮಿ, ಚಾಮರಾಜನಗರದ ಅಪರ ಜಿಲ್ಲಾಧಿಕಾರಿ ಮೌನ ಗೌತ್ರ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಧಿಕಾರಿ ಶಿವಮೂರ್ತಿ ಹಲವರು ಭಾಗವಹಿಸಿದ್ದರು.