ಉಡುಪಿ: ಜ್ಞಾನ ಎಂಬುದು ಒಂದು ಶಕ್ತಿ, ಪುಸ್ತಕಗಳನ್ನು ಓದುವುದರಿಂದ ನಾವು ಜ್ಞಾನದ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಓದು ನಮ್ಮ ಭಾಷಾ ಕೌಶಲ್ಯ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಆದ್ದರಿಂದ ಎಲ್ಲರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಹೇಳಿದರು. ಬುಧವಾರ ಅಜ್ಜರಕಾಡು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ನಡೆದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪುಸ್ತಕಗಳು ಮತ್ತು ಲೇಖನಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಮಹಾನ್ ಕ್ರಾಂತಿಕಾರಿಗಳ ಲೇಖನಗಳನ್ನು ಓದಿ ಪ್ರಭಾವಿತರಾಗಿ ಅದೆಷ್ಟೋ ಮಂದಿ ಸ್ವಾತಂತ್ರ ಹೋರಾಟದಲ್ಲಿ ಧುಮುಕಿದ್ದಾರೆ. ಪುಸ್ತಕಗಳು ಸಮಾಜ ಪರಿವರ್ತನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸಾರ್ವಜನಿಕರು ಕೂಡ ಗ್ರಂಥಗಳನ್ನು ಬರೆಯಬೇಕು. ಅವುಗಳನ್ನು ವಿದ್ಯಾರ್ಥಿಗಳು ಓದುವಂತಾಗಬೇಕು ಎಂದರು. ಈ ಸಂದರ್ಭ ವಿದ್ಯಾರ್ಥಿನಿ ನಯನ ಅವರು, ಉಡುಪಿ ನಗರದಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ ಇರುವುದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲವಾಗುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಲಂಚವಿಲ್ಲದ ಸರ್ಕಾರಿ ವಿಭಾಗ ಗ್ರಂಥಾಲಯ !
ಹಿರಿಯ ಓದುಗರೊಬ್ಬರು, ಸರಕಾರಿ ಇಲಾಖೆಗಳಲ್ಲಿ ಲಂಚ ಇಲ್ಲದೆ ಕಾರ್ಯನಿರ್ವಹಿಸುವ ಮುಕ್ತ ವಿಭಾಗವಿದ್ದರೆ ಅದು ಗ್ರಂಥಾಲಯ. ಬ್ಯಾಂಕನ್ನು ತೆರೆದಿಟ್ಟರೆ ಕಳ್ಳರು ನುಗ್ಗಿ ಹಣವನ್ನು ದೋಚುತ್ತಾರೆ, ಆದರೆ ಗ್ರಂಥಾಲಯವನ್ನು ತೆರೆದಿಟ್ಟರೂ ಕಳ್ಳರು ಬರುವುದಿಲ್ಲ, ಏಕೆಂದರೆ ಇಲ್ಲಿ ಕಳ್ಳತನ ಮಾಡಲು ಪುಸ್ತಕಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಇಂದು ಜನರಲ್ಲಿ ಓದುವ ಆಸಕ್ತಿ ಕಡಿಮೆಯಾಗಿದ್ದು ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಗ್ರಂಥಾಲಯಗಳು ಹೆಚ್ಚು ಜನರನ್ನು ಆಕರ್ಷಿಸಲು ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.