ಜಿಲ್ಲಾದ್ಯಂತ ಮಹಾನ್ ನಾಯಕರ ಸ್ಮರಣೆ, ಜನಪ್ರತಿನಿಧಿಗಳಿಂದ ಮಾಲಾರ್ಪಣೆ, ಸರ್ವಧರ್ಮ ಪ್ರಾರ್ಥನೆ, ಪ್ರಶಸ್ತಿ ಪ್ರದಾನ
ರಾಯಚೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ 154 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 119 ನೇ ಜಯಂತಿಯನ್ನು ಸೋಮವಾರ ಎಲ್ಲೆಡೆ ಆಚರಿಸಲಾಯಿತು.
ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕುಗಳಾದ ದೇವದುರ್ಗ, ಮಾನ್ವಿ, ಲಿಂಗಸುಗೂರು, ಮಸ್ಕಿ, ಸಿರವಾರ, ಸಿಂಧನೂರು ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ, ರಾಜಕೀಯ ಪಕ್ಷಗಳ ಕಚೇರಿಯಲ್ಲಿ,ಶಾಲಾ-ಕಾಜೇಜು, ವಿವಿ ಮತ್ತು ನಾನಾ ಸಂಘ-ಸಂಸ್ಥೆಗಳ ಕಾರ್ಯಾಲಯಗಳಲ್ಲಿ ದೇಶ ಕಂಡ ಮಹಾನ್ ನಾಯಕರ ಭಾವಚಿತ್ರ, ಪುತ್ಥಳಿ, ನಾಮಫಲಕಗಳಿಗೆ ಮಾಲಾರ್ಪಣೆ ಮಾಡಿ ನಮಿಸಲಾಯಿತು. ಇದೇ ವೇಳೆ ಗಾಂಧಿ-ಶಾಸ್ತ್ರಿ ಅವರ ಜೀವನ, ಸಾಧನೆ-ಹೋರಾಟದ ಹಾದಿ ಸ್ಮರಿಸಲಾಯಿತು.ಸರ್ವ ಧರ್ಮ ಪ್ರಾರ್ಥನೆ: ಜಿಲ್ಲಾಡಳಿತ, ಜಿಪಂ. ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಸಚಿವ ಎನ್.ಎಸ್.ಬೋಸರಾಜು ಮಾಲಾರ್ಪಣೆ ಮಾಡಿದರು. ಇದೇ ವೇಳೆ ಸರ್ವಧರ್ಮ ಪ್ರಾರ್ಥನೆ ಹಾಗೂ ರಾಮಧುನು ಕಾರ್ಯಕ್ರಮ ನೆರವೇರಿಸಲಾಯಿತು.ವಿಜೇತರಿಗೆ ಬಹುಮಾನ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಚಿವ ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಗಣ್ಯರು ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಪದವಿ ಪೂರ್ವ ವಿಭಾಗದಲ್ಲಿ ದೇವದುರ್ಗದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಪ್ರಥಮ ಸ್ಥಾನ ಪಡೆದಿದ್ದು, 3000 ರು. ನಗದು ಬಹುಮಾನ ವಿತರಿಸಲಾಯಿತು. ಸಿಂಧನೂರಿನ ಎಕ್ಸ್ಲೆಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸನಾ ಸುಲ್ತಾನಾ ದ್ವಿತೀಯ ಸ್ಥಾನ ಪಡೆದಿದ್ದು, 2000 ನಗದು ಬಹುಮಾನ, ಮಾನವಿಯ ಪ್ರಗತಿ ಪಪೂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ನಂದಿನಿ ತೃತಿಯ ಸ್ಥಾನ ಪಡೆದಿದ್ದು, 1 ಸಾವಿರ ರು. ನಗದು ಬಹುಮಾನ ವಿತರಿಸಲಾಯಿತು.ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಮಾನ್ವಿ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಂಪಯ್ಯ ಪ್ರಥಮ ಸ್ಥಾನ, ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ರೇಣುಕಾ ದ್ವಿತೀಯ, ಸಿಂಧನೂರಿನ ಆಕ್ಸ್ಫರ್ಡ್ ಡಿಗ್ರಿ ಕಾಲೇಜ್ ಆಫ್ ಆರ್ಟ್ ಆ್ಯಂಡ್ ಕಾಮರ್ಸ್ನ ಕಲ್ಪನಾ ತೃತೀಯ ಸ್ಥಾನ ಪಡೆದಿದ್ದು, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಛಾಯಾಚಿತ್ರ ಪ್ರದರ್ಶನ: ಗಾಂಧಿ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ ಜೀವನಗಾಥೆಯ ಕುರಿತು ಏರ್ಪಡಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಛಾಯಾ ಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಡಿಸಿ ಎಲ್.ಚಂದ್ರಶೇಖರ ನಾಯಕ, ಎಸ್ಪಿ ನಿಖಿಲ್ ಬಿ. ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.