ಕನ್ನಡಪ್ರಭ ವಾರ್ತೆ ಅಥಣಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಎಂಇಎಸ್ ಮುಖಂಡರು ಮತ್ತು ಶಿವಸೇನೆ ಕಾರ್ಯಕರ್ತರು ಮತ್ತೆ ಉದ್ಧಟತನ ಮೆರೆಯುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೊಲ್ಲಾಪುರ ನಗರಕ್ಕೆ ತೆರಳಿದ್ದ ಕರ್ನಾಟಕ ಸಾರಿಗೆ ಬಸ್‌ಗಳಿಗೆ ಕಪ್ಪು ಮಸಿ ಬಡಿದು ಸಾರಿಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಎಚ್.ಶಿವರಾಮೇಗೌಡ ಬಣದ ಕರವೇ ಅಧ್ಯಕ್ಷ ಉದಯ ಮಾಕಾಣಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಎಂಇಎಸ್ ಮುಖಂಡರು ಮತ್ತು ಶಿವಸೇನೆ ಕಾರ್ಯಕರ್ತರು ಮತ್ತೆ ಉದ್ಧಟತನ ಮೆರೆಯುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೊಲ್ಲಾಪುರ ನಗರಕ್ಕೆ ತೆರಳಿದ್ದ ಕರ್ನಾಟಕ ಸಾರಿಗೆ ಬಸ್‌ಗಳಿಗೆ ಕಪ್ಪು ಮಸಿ ಬಡಿದು ಸಾರಿಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಎಚ್.ಶಿವರಾಮೇಗೌಡ ಬಣದ ಕರವೇ ಅಧ್ಯಕ್ಷ ಉದಯ ಮಾಕಾಣಿ ಆಗ್ರಹಿಸಿದರು. ಪಟ್ಟಣದ ಶಿವಯೋಗಿ ವೃತ್ತದಲ್ಲಿ ಸೋಮವಾರ ಎಂಇಎಸ್ ಕಾರ್ಯಕರ್ತರು ನಡೆಸಿದ ಪುಂಡಾಟಿಕೆ ಖಂಡಿಸಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ, ಬೆಳಗಾವಿಯಲ್ಲಿ ಉದ್ದೇಶಪೂರ್ವಕವಾಗಿ ಬೆಳಗಾವಿ ಗಡಿ ವಿಚಾರವನ್ನು ಕೆಣಕುತ್ತಾ ಮಹಾಮೇಳಾವ್ ನಡೆಸುವುದು, ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಆಚರಿಸುವುದು ಸೇರಿ ಇನ್ನಿತರೆ ಕೃತ್ಯಗಳನ್ನು ಎಸಗಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಗಡಿ ಭಾಗದಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸಾಮರಸ್ಯದಿಂದ ಬದುಕು ನಡೆಸುತ್ತಿದ್ದು, ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಪುಂಡರು ತಮ್ಮ ರಾಜಕೀಯ ಲಾಭಕ್ಕಾಗಿ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಸೋಮವಾರ ಕೊಲ್ಲಾಪುರದಲ್ಲಿ ನಡೆದಿರುವ ಘಟನೆ ಖಂಡನೀಯವಾಗಿದ್ದು, ನಮ್ಮ ಸಾರಿಗೆ ಸಿಬ್ಬಂದಿಗೆ ಕಿರುಕುಳ ನೀಡುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿನ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳಿಗೆ ಅವಮಾನಿಸಿದರೆ ಅಥಣಿಯಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ವಾಹನಕ್ಕೆ ಕನ್ನಡ ಧ್ವಜಗಳನ್ನು ಕಟ್ಟಿ, ಸಾರಿಗೆ ಸಿಬ್ಬಂದಿಗೆ ಕನ್ನಡ ಶಲ್ಯೆ ಹಾಕಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಜಗನ್ನಾಥ ಬಾಮನಿ, ಅಣ್ಣಾಸಾಬ ತೆಲಸಂಗ, ಕುಮಾರ ಬಡಿಗೇರ, ರಿಯಾಜ್ ಸನದಿ, ಅನಿಲ್ ಒಡಿಯರ್, ಸುಕುಮಾರ ಮಾದರ, ಮುತ್ತುರಾಜ್ ಗೊಲ್ಲರ, ಶಬ್ಬೀರ್ ಸಾತಬಚ್ಚಿ, ಅನಿಲ ಪೂಜಾರಿ, ವಿಲಾಸ ಕುಲಕರ್ಣಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.