ಜಾಗತೀಕರಣದಲ್ಲಿ ಗಾಂಧೀಜಿಯನ್ನು ಅರ್ಥೈಸಿಕೊಂಡಿಲ್ಲ

KannadaprabhaNewsNetwork |  
Published : Oct 03, 2025, 01:07 AM IST
2ಕೆಪಿಎಲ್23 ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ಮೂರು ದಶಕಗಳಲ್ಲಿ ಲಾಭವೇ ಅಂತಿಮ ಸತ್ಯವಾಗಿದ್ದರಿಂದ ಸ್ವಾರ್ಥ ನಿತ್ಯ ಮಂತ್ರವಾಗಿದೆ

ಕೊಪ್ಪಳ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಿಚಾರಧಾರೆಗಳನ್ನು ಜಾಗತೀಕರಣದ ಅವಧಿ ಅರ್ಥೈಸಿಕೊಳ್ಳುವಲ್ಲಿ ಎಡವಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧಿ ಮತ್ತು ಶಾಸ್ತ್ರೀಯವರು ಅಭಿವೃದ್ಧಿಗಿಂತ ಸರ್ವೋದಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸುಸ್ಥಿರ ಅಭಿವೃದ್ಧಿ ಒತ್ತಿ ಹೇಳಿದ್ದರು. ಶ್ರಮ ಹಾಗೂ ಸರಳತೆಯ ಮಾರ್ಗ ತಿಳಿಸಿದರು. ಮೂರು ದಶಕಗಳ ಜಾಗತೀಕರಣದ ಅವಧಿಯಲ್ಲಿ ನಮ್ಮ ವ್ಯವಸ್ಥೆ ಈ ತತ್ವಗಳ ವಿರುದ್ಧ ಹೋಗಿದೆ. ಹೀಗಾಗಿ ಅನೇಕ ಜ್ವಲಂತ ಸಮಸ್ಯೆಗಳು ಉದ್ಭವಿಸಿವೆ. ಈ ನಾಯಕರ ವಿಚಾರ ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು ಅದಕ್ಕೆ ಮುಖ್ಯ ಕಾರಣ ಎಂದು ಹೇಳಿದರು.

ಲಾಭ ಹಾಗೂ ವೈಯಕ್ತಿಕ ಹಿತಾಸಕ್ತಿ ಜಾಗತೀಕರಣ ಕಲಿಸಿಕೊಟ್ಟ ನೀತಿಗಳು. ಮೂರು ದಶಕಗಳಲ್ಲಿ ಲಾಭವೇ ಅಂತಿಮ ಸತ್ಯವಾಗಿದ್ದರಿಂದ ಸ್ವಾರ್ಥ ನಿತ್ಯ ಮಂತ್ರವಾಗಿದೆ. ವ್ಯಕ್ತಿಗತ ಹಿತ ಮುಖ್ಯವಾಗಿ ಸಮಷ್ಟಿ ಹಿತ ಹಿಂದೆ ಸರಿದಿದೆ. ಅಭಿವೃದ್ಧಿಯನ್ನೇ ಸರ್ವೋದಯ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವಿಷಾದಿಸಿದರು.

ಇಂದಿನ ಯುವ ಜನತೆ ಗಾಂಧೀಜಿಯವರನ್ನು ಸರಿಯಾಗಿ ತಿಳಿದುಕೊಂಡಿಲ್ಲ. ವಿವಿಧ ಸಿದ್ಧಾಂತ ಪ್ರತಿಪಾದಕರ ಅಭಿಪ್ರಾಯಗಳನ್ನೇ ಸತ್ಯ ಎಂದು ನಂಬಿ ಗಾಂಧಿ ದೇಶ ಒಡೆದರು ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಅಖಂಡ ಭಾರತಕ್ಕೆ ಪ್ರಯತ್ನ ಪಟ್ಟ ಅನೇಕರಲ್ಲಿ ಗಾಂಧಿ ಪ್ರಮುಖರು.ಇನ್ನೊಬ್ಬರ ವಿಚಾರ ತಿಳಿದುಕೊಳ್ಳುವ ಬದಲು ಗಾಂಧೀಜಿಯವರ ವಿಚಾರ ತಿಳಿದುಕೊಳ್ಳುವುದು ಅಗತ್ಯ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಅವರ ವಿಚಾರಧಾರೆ ತಿರುಚುವ ಕೆಲಸ ನಿಲ್ಲಬೇಕು ಎಂದರು.

ಜಾತಿ,ಧರ್ಮ,ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ತುಂಡು ತುಂಡಾಗಿರುವ ಇಂದಿನ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಗಾಂಧಿ ಮತ್ತು ಶಾಸ್ತ್ರೀಯವರ ವಿಚಾರಧಾರೆಗಳಿಗಿದೆ ಎಂದು ಹೇಳಿದರು.

ಈ ವೇಳೆ ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಉಪಾಧ್ಯಕ್ಷ ಮೂರ್ತ್ಯಪ್ಪ ಹಿಟ್ನಾಳ್, ಓಬಿಸಿ ಜಿಲ್ಲಾ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಚುನಾವಣಾ ಅಧಿಕಾರಿ ಶಿವಕುಮಾರ್ ಏಣಿಗಿ, ರೋಹಿತ್ ಹಣವಾಳ, ಸುರೇಶ್ ದದೇಗಲ್, ಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ