ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಗಳಿಸುವುದನ್ನು ತೋರಿಸಿದ ಮಹಾನ್ ನಾಯಕ ಗಾಂಧೀಜಿ: ತಮ್ಮಯ್ಯ

KannadaprabhaNewsNetwork |  
Published : Oct 03, 2025, 01:07 AM IST
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156ನೇ ಜನ್ಮ ದಿನವನ್ನು ಜಿಲ್ಲಾಧಿಕಾರಿ ಕಚೇರಿ ಒಳಾವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯನ್ನು ಮಹಾತ್ಮರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಇತರರು ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.

- ಜಿಲ್ಲಾಡಳಿತದಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 156 ನೇ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯನ್ನು ಮಹಾತ್ಮರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಇತರರು ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೇರಾ ಭಾರತ್ ಮಹಾನ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತದಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156 ನೇ ಜನ್ಮ ದಿನ ಗುರುವಾರ ಆಚರಿಸಲಾಯಿತು.

ಗಾಯಕರಾದ ಸುರೇಂದ್ರ ನಾಯಕ್ ಹಾಗೂ ಲಾಲಿತ್ಯ ಅಣ್ವೇಕರ್ ತಂಡದವರು ಗಾಂಧೀಜಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಂ... ಹಾಗೂ ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ....’ ಭಜನೆ ಹಾಡಿದರು. ಅನಂತರ ನಡೆದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಔರಂಗಜೇಬ್ ಪಾಷಾ ಕುರಾನ್ ಹಾಗೂ ಫಾದರ್ ಬಿಷಪ್ ಥಾಮಸ್ ಅಂತೋಣಿ ಬೈಬಲ್ ಪಠಣ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧಿ ಜಯಂತಿ ಅಂಗವಾಗಿ ಪದವಿ, ಸ್ನಾತಕೋತ್ತರ ಪದವಿ, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಅಹಿಂಸೆ ಹೋರಾಟದಿಂದ ಸ್ವಾತಂತ್ರ್ಯ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ದೇಶದ ಮಹಾನ್ ನಾಯಕ ಮಹಾತ್ಮಾ ಗಾಂಧೀಜಿ. ಅಹಿಂಸಾ ತತ್ವದಡಿ ಜನರನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಫಲವಾಗಿ ನಮಗೆ 1947ರ ಆ.15 ರಂದು ನಮಗೆ ಸ್ವಾತಂತ್ರ್ಯ ಲಭಿಸಿತು. ಈ ಹೋರಾಟದ ಸಂದರ್ಭದಲ್ಲಿ ಇಂಡಿಯನ್ ಕಾಂಗ್ರೆಸ್‌ ಅಧ್ಯಕ್ಷರಾಗಿ 6 ವರ್ಷಗಳು ಕಾರ್ಯ ನಿರ್ವಹಿಸಿದ್ದ ಅವರು, ಜವಾಹರ್ ಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಹೀಗೆ ಹಲವರನ್ನು ಒಗ್ಗೂಡಿಸಿ ಹೋರಾಟದಲ್ಲಿ ಧುಮುಕುತ್ತಾರೆ. ಅಂಥವರ ಶ್ರಮದಿಂದ ಇಂದು ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಸ್ವದೇಶಿ ಹತ್ತಿಯಿಂದ ತಯಾರಿಸಿದ ಉಡುಪುಗಳನ್ನು ಧರಿಸಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಾದರಿ ಯಾಗಿದ್ದಾರೆ. ಗಾಂಧೀಜಿ ನೆನಪು ಜಯಂತಿಗೆ ಸೀಮಿತವಾಗಬಾರದು. ಅವರ ವಿಚಾರಧಾರೆ ನಮ್ಮ ಯುವಪೀಳಿಗೆ ಅನುಸರಿಸುವಂತಾಗಬೇಕು ಎಂದು ಆಶಿಸಿದರು. ಇಂದು ಲಾಲ್ ಬಹದ್ದೂರ್ ಶಾಸ್ತ್ರಿ 121 ನೇ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ. ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷರಾಗಿ, ದೇಶದ ಪ್ರಧಾನಿಯಾಗಿ ಅಲ್ಪಾವಧಿ ಸೇವೆ ಸಲ್ಲಿಸಿದರೂ ದೀರ್ಘಾವಧಿ ಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಇಡೀ ದೇಶದಲ್ಲಿ ಬರಗಾಲ ಬಂದಾಗ ಒಂದು ಹೊತ್ತು ಉಪವಾಸ ಇರುವಂತೆ ಕರೆ ಕೊಟ್ಟಿದ್ದರು. ಉಳ್ಳವರು ಉಪವಾಸವಿದ್ದರೆ ಬಡವರಿಗೆ ಊಟ ಸಿಗುತ್ತದೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ಹೀಗಾಗಿ ವಾರದಲ್ಲಿ ಇಂದಿಗೂ ಅನೇಕ ಜನ ಒಂದು ಹೊತ್ತು ಊಟ ಬಿಡುತ್ತಿದ್ದಾರೆ. ಇದು ಶಾಸ್ತ್ರಿಯವರ ಮನವಿಗೆ ಮನ್ನಣೆ ನೀಡುತ್ತಿರುವ ಫಲವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಇಂದು ಮಹಾತ್ಮಾ ಗಾಂಧೀಜಿ 156 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ 121 ನೇ ಜಯಂತಿ ಎಂಬುದು ವಿಶೇಷ . ದೇಶಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟಕ್ಕೂ ಗಾಂಧೀಜಿ ಕೊಡುಗೆ ಅಪಾರ, ಸ್ಮರಣೀಯವಾಗಿದೆ. ಯುವಪೀಳಿಗೆ ಗಾಂಧೀಜಿ ತತ್ವ, ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು. ಈ ನಾಡನ್ನು ಕಟ್ಟುವ ಯುವಜನತೆಗೆ ಬೆಳಕಾಗುವ ಸ್ಫೂರ್ತಿದಾಯಕ ವ್ಯಕ್ತಿತ್ವವಿದ್ದರೆ ಅದು ಗಾಂಧೀಜಿಯವರದು. ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿ ಈ ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು. ವಿಪ ಸದಸ್ಯ ಸಿ.ಟಿ.ರವಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಭಾರತೀ ಮೌಲ್ಯಗಳ ಪ್ರತೀಕ. ಭಾರತ ಜಗತ್ತಿಗೆ ಅಹಿಂಸೆ, ಶಾಂತಿ, ‘ಸರ್ವೇ ಜನ ಸುಖಿನೋ ಭವಂತು’ ಎನ್ನುವ ಮಂತ್ರ ಕೊಟ್ಟಿರುವುದು ಭಾರತ. ಆ ಭಾರತೀಯತೆ ಪ್ರತೀಕ ಗಾಂಧೀಜಿ. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರಿಗೆ ಹೋರಾಟದ ಕೆಚ್ಚನ್ನು ಹಬ್ಬಿಸುವುದರೊಳಗೆ ಗಾಂಧೀಜಿ ಪಾತ್ರ ಬಹಳ ದೊಡ್ಡದು. ಸರಳ ವಿಷಯಗಳನ್ನೆತ್ತಿಕೊಂಡ ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಹೋರಾಟವನ್ನಾಗಿ ಮಾಡಿದರು. ಖಾದಿ, ಚರಕ, ಉಪ್ಪಿನ ಸತ್ಯಾಗ್ರಹದ ಮೂಲಕ ಹೋರಾಟವನ್ನು ಜನಮಾನಸಕ್ಕೆ ಮುಟ್ಟಿಸಿ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ನಾವೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸಂಕಲ್ಪಶಕ್ತಿ ಪ್ರೇರೇಪಿಸಿದ್ದು ಗಾಂಧೀಜಿ ಎಂದರು.

ಕಾರ್ಯಕ್ರಮದಲ್ಲಿ ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು. 2 ಕೆಸಿಕೆಎಂ 2

ರಾಷ್ಟ್ರಪಿತ, ಮಹಾತ್ಮಾ ಗಾಂಧೀಜಿ 156ನೇ ಜನ್ಮ ದಿನವನ್ನು ಜಿಲ್ಲಾಧಿಕಾರಿ ಕಚೇರಿ ಒಳಾವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ