ಡಿ.ಕೆ. ಶಿವಕುಮಾರ್ ಸಿಎಂ ಆಗಲು ನವರಾತ್ರಿ ಉಪವಾಸ ಮಾಡಿದ ಕುಣಿಗಲ್ ಶಾಸಕ

KannadaprabhaNewsNetwork |  
Published : Oct 03, 2025, 01:07 AM IST
ಫೋಟೋ ಇದೆ  :- 2 ಕೆಜಿಎಲ್ 1 : ದಲಿತರ  ಮನೆಯಲ್ಲಿ ಊಟ ಮಾಡುತ್ತಿರುವ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ | Kannada Prabha

ಸಾರಾಂಶ

ಕುಣಿಗಲ್ ಅಭಿವೃದ್ಧಿಗೆ ತುಮಕೂರು ಜಿಲ್ಲೆಯ ಹಲವಾರು ನಾಯಕರು ಅಸಹಕಾರ ತೋರಿದ್ದಾರೆ. ಅಭಿವೃದ್ಧಿಗೆ ಅನುದಾನದ ಸಮಸ್ಯೆ ನಮ್ಮನ್ನು ಕಾಡುತ್ತಿದೆ ಎಂಬ ನೋವು ನನಗಿದೆ,

ಕನ್ನಡಪ್ರಭ ವಾರ್ತೆ ಕುಣಿಗಲ್

ನವರಾತ್ರಿಯಂದು ಹಲವರು ಸಂಕಲ್ಪ ಮಾಡಿ ಉಪವಾಸ ಮಾಡುವ ಮೂಲಕ ಶಕ್ತಿ ದೇವತೆಗಳಿಂದ ವರ ಪಡೆಯುತ್ತಾರೆ, ಅದೇ ರೀತಿ ನಾನು 9 ದಿನಗಳ ಕಾಲ ಉಪವಾಸ ಮಾಡಿ ಮೂರು ಸಂಕಲ್ಪ ಮಾಡಿದ್ದೆ, ಅದರಲ್ಲಿ ನಮ್ಮ ಮನೆಯ ಮುಖ್ಯಸ್ಥರಿಗೆ ಈ ರಾಜ್ಯದ ಉನ್ನತ ಹುದ್ದೆ ಸಿಗಬೇಕು ಎಂಬ ಸಂಕಲ್ಪವೂ ಒಂದಾಗಿದೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಮಾರ್ಮಿಕವಾಗಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಅವರ ಪರವಾಗಿ ಉಪವಾಸ ಮಾಡಿರುವುದಾಗಿ ತಿಳಿಸಿದ್ದಾರೆ.

ತಾಲೂಕಿನ ಗಡಿ ಭಾಗವಾದ ಯಡಿಯೂರು ಹೋಬಳಿ ವಗರಗೆರೆ ಗ್ರಾಮದ ದಲಿತ ವಿಧವೆ ಮಹಿಳೆ ಜಯಮ್ಮ ಎಂಬುವರ ಮನೆಯಲ್ಲಿ ಮುದ್ದೆ ಸಾರು ಊಟ ಮಾಡಿ ಉಪವಾಸ ಅಂತ್ಯಗೊಳಿಸಿ ಮಾತನಾಡಿದರು.

ವಿಜಯದಶಮಿಯ ಸಂಕಲ್ಪಗಳು ಈಡೇರುತ್ತವೆ ಎಂಬ ನಂಬಿಕೆ ನಮ್ಮ ಹಲವಾರು ತಾಯಂದಿರಲ್ಲಿ ಇದೆ, ನಾನು ಕೂಡ ಮೊದಲು ದೇವರು, ಮಠ, ದೇಗುಲಗಳನ್ನು ನಂಬದವನಾಗಿದ್ದೆ, ಆದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಾಗುತ್ತಿದೆ, ಹಿಂದೂ ಧರ್ಮದ ಸಂಪ್ರದಾಯದಂತೆ ಹಲವಾರು ದೈವಿಕ ಆಚಾರಗಳಲ್ಲಿ ತೊಡಗಿದ್ದೇನೆ ಎಂದರು.

ವ್ರತದ ಉದ್ದೇಶಗಳಾದ ಮೂರು ಸಂಕಲ್ಪಗಳಲ್ಲಿ ಮುಖ್ಯವಾಗಿರುವುದು ನನ್ನ ಕುಟುಂಬದ ಮುಖ್ಯಸ್ಥರಿಗೆ ಈ ರಾಜ್ಯದ ಉನ್ನತ ಹುದ್ದೆ ಸಿಗಬೇಕು ಎಂಬುದು, ಇನ್ನೊಂದು ಕುಣಿಗಲ್ ತಾಲೂಕಿನಲ್ಲಿ ಹೆಚ್ಚಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿ ಎಂಬುದು, ಮತ್ತೊಂದು ಕುಣಿಗಲ್ ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬುದು ಮುಖ್ಯ ಸಂಕಲ್ಪಗಳಾಗಿವೆ ಎಂದರು.

ದಲಿತರ ಮನೆಯಲ್ಲಿ ಉಪವಾಸ ಅಂತ್ಯಗೊಳಿಸಿ, ಇವರ ಮನೆ ಮುದ್ದೆ ಸಾರು ನನಗೆ ತೃಪ್ತಿ ತಂದಿದೆ, ಈ ತಾಯಿಯ ಸಮಸ್ಯೆಯನ್ನು ನೇರವಾಗಿ ಅರಿತು ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ಮಾಡುವುದಾಗಿ ತಿಳಿಸಿದರು.

ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ರಂಗನಾಥ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿರವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಮತ್ತೆ ರಂಗನಾಥ್ ಲೂಟಿಗಾಗಿ ಮಾಡುತ್ತಿರುವ ಯೋಜನೆ ಇದಾಗಿದೆ ಎಂಬುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ತಮ್ಮ ಸ್ಥಾನ ಅರಿತು ಮಾತುಗಳನ್ನಾಡುವುದನ್ನು ಕಲಿಯಲಿ ಎಂದರು.

ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಿದ್ದೇನೆ, ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ಹಲವಾರು ಯೋಜನೆಗಳನ್ನು ನಾವು ಮುಂದುವರಿಸಿದ್ದೇವೆ. ಡಿ. ಕೆ. ಶಿವಕುಮಾರ್ ಯಾವುದೇ ಪ್ರಧಾನಿ ಹೆಸರನ್ನು ಅಥವಾ ಮಾಜಿ ಮುಖ್ಯಮಂತ್ರಿ ಹೆಸರನ್ನು ಹೇಳಿಕೊಂಡು ಕೆಲಸ ಮಾಡುತ್ತಿಲ್ಲ, ತಮ್ಮ ಸ್ವಂತ ಪರಿಶ್ರಮ ಮತ್ತು ಜನಗಳ ಬೆಂಬಲದಿಂದ ಅವರು ಬೆಳೆಯುತ್ತಿದ್ದು, ಕುಮಾರಸ್ವಾಮಿಯವರಿಗೆ ಡಿ.ಕೆ. ಶಿವಕುಮಾರ್ ಏಳಿಗೆಯನ್ನು ಸಹಿಸಲು ಆಗುತ್ತಿಲ್ಲ ಎಂದರು.

ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಿಡದಿ ಟೌನ್‌ಶಿಪ್ ಮಾಡಿದ್ದರು, ನಂತರ ಮುಂದುವರಿದ ಭಾಗವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಡಿ.ಕೆ. ಶಿವಕುಮಾರ್ ಸರ್ಕಾರ ಮಾಡುತ್ತಿದೆ ಎಂದರು.

ಬೆಂಗಳೂರು ದಕ್ಷಿಣಕ್ಕೆ ಕುಣಿಗಲ್ ತಾಲೂಕನ್ನು ಸೇರಿಸುವ ವಿಚಾರವಾಗಿ ಮಾತನಾಡಿ, ಕುಣಿಗಲ್ ಅಭಿವೃದ್ಧಿಗೆ ತುಮಕೂರು ಜಿಲ್ಲೆಯ ಹಲವಾರು ನಾಯಕರು ಅಸಹಕಾರ ತೋರಿದ್ದಾರೆ. ಅಭಿವೃದ್ಧಿಗೆ ಅನುದಾನದ ಸಮಸ್ಯೆ ನಮ್ಮನ್ನು ಕಾಡುತ್ತಿದೆ ಎಂಬ ನೋವು ನನಗಿದೆ, ಇನ್ನೊಂದು ಭಾಗವಾಗಿ ಹಲವರು ಬುದ್ಧಿಜೀವಿಗಳು ಹಾಗೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೆಲವರು ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಬೇಕೆಂದು ಮುಖ್ಯಮಂತ್ರಿ ಕಚೇರಿಗೆ ಪತ್ರ ಕೊಟ್ಟಿದ್ದಾರೆ ಎಂಬ ಮಾಹಿತಿ ನನಗಿದೆ. ಆದರೆ ಈ ಸಂಬಂಧ ನಾನು ಏನು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ, ಇದಕ್ಕೆ ಕುಣಿಗಲ್ ಜನತೆಯ ಜನಾಭಿಪ್ರಾಯ ಬಹು ಮುಖ್ಯವಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಟಕದ ಮೂಲಕ ಹೆಲ್ಮೆಟ್‌ ಪ್ರಾಮುಖ್ಯತೆಯ ಮನವರಿಕೆ
ಸಮಾಜಕ್ಕೆ ನಿವೃತ್ತರ ಮಾರ್ಗದರ್ಶನ ಅಗತ್ಯ: ಬಸವರಾಜು