ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಗಣೇಶ ಹಬ್ಬದ ಸಡಗರ ಮೇಳೈಸಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ವಿನಾಯಕ ಆರಾಧನೆ ಕಂಡು ಬಂದಿದೆ.
ವೈವಿಧ್ಯಮಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಭಕ್ತರು ವಿಘ್ನವಿನಾಶಕನಿಗೆ ನಿತ್ಯ ವಿಶೇಷ ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದಾರೆ.ನಗರದಲ್ಲಿ ಈ ಬಾರಿ ಸುಮಾರು 500ಕ್ಕೂ ಹೆಚ್ಚು ಕಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಓಣಿ ಓಣಿಗಳಲ್ಲಿ ಗಣಪನ ಪ್ರತಿಷ್ಠಾಪನೆ ಕಂಡು ಬರುತ್ತಿದೆ. ನಗರದಲ್ಲಿ ಹಬ್ಬದ ಸಡಗರ 11 ದಿನಗಳ ಕಾಲ ಮುಂದುವರಿಯಲಿದೆ. 3, 5, 9, 11 ದಿನಗಳವರೆಗೆ ಗಣಪನ ಪ್ರತಿಷ್ಠಾಪಿಸಲಾಗುತ್ತಿದೆ. ಕೊನೆಯ ದಿನ ಮೆರವಣಿಗೆ ಮೂಲಕ ವಿಸರ್ಜನೆ ಕಾರ್ಯಕ್ರಮ ಜರುಗಲಿದೆ. ನಗರದ ಬಹುತೇಕ ಗಣೇಶ ಮೂರ್ತಿಗಳು 5ನೇ ದಿನಕ್ಕೆ ವಿಸರ್ಜನೆಗೊಳ್ಳುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ 1 ಹಾಗೂ 3ನೇ ದಿನಕ್ಕೆ ಬಹುತೇಕ ವಿಸರ್ಜನಗೊಳಿಸಲಾಗುತ್ತದೆ. ಗಮನ ಸೆಳೆವ ಗಣೇಶ ಮೂರ್ತಿಗಳು:
ನಗರದ ಕಪ್ಪಗಲ್ ರಸ್ತೆಯ ಸರ್ ಎಂವಿ ನಗರದ 22ನೇ ಕ್ರಾಸ್‌ನಲ್ಲಿ 14ನೇ ವರ್ಷದ ಗಣೇಶ ಉತ್ಸವ ಸಡಗರ ಸಂಭ್ರಮದಲ್ಲಿ ನಡೆಯುತ್ತಿದೆ. ರಾಯಲ್ ಫ್ರೆಂಡ್ಸ್ ವಿನಾಯಕ ಮಿತ್ರ ಮಂಡಳಿ ಪ್ರತಿಷ್ಠಾಪಿಸಿರುವ ಆದಿಶೇಷನ ಅವತಾರದ ಗಣೇಶಮೂರ್ತಿ ಗಮನ ಸೆಳೆಯುತ್ತಿದೆ. ಇಲ್ಲಿ ನಿತ್ಯ ವಿಶೇಷ ಪೂಜೆ, ರಂಗೋಲಿಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಪ್ರಸಾದ ನಡೆಯುತ್ತಿದೆ.ಕಪ್ಪಗಲ್ ರಸ್ತೆಯ ಎಸಿ ಬೀದಿಯಲ್ಲಿ ಶ್ರೀವಿನಾಯಕ ಕೃಷ್ಣ ಮಿತ್ರಮಂಡಳಿ ಪ್ರತಿಷ್ಠಾಪಿಸಿರುವ ಪಾರ್ವತಿದೇವಿ ಎತ್ತಿಕೊಂಡಿರುವ ಗಣೇಶ, ಗಾಂಧಿನಗರದಲ್ಲಿ ಯಂಗ್ ಸ್ಟಾರ್ ವಿನಾಯಕ ಮಿತ್ರ ಮಂಡಳಿ ನಿರ್ಮಿಸಿರುವ ನೃತ್ಯ ಮಾಡುತ್ತಿರುವ ಗಣೇಶ, ಪಟೇಲ್ ನಗರದಲ್ಲಿ ಕಳೆದ 25 ವರ್ಷಗಳಿಂದ ಪ್ರತಿಷ್ಠಾಪಿಸುತ್ತಿರುವ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಬಾಲರಾಮ ಗಣೇಶ, ಬದರಿನಾರಾಯಣ ದೇವಸ್ಥಾನ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಚಿಟ್ಟೆಯಂತೆ ಹಾರುವ ಗಣೇಶ ಹೀಗೆ ವಿವಿಧೆಡೆ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನಿತ್ಯ ಸಾವಿರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡೆಯತ್ತಿದ್ದಾರೆ.
ಮಣ್ಣಿನ ಮೂರ್ತಿಗಳೇ ಹೆಚ್ಚು:ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಿಒಪಿ ಗಣೇಶನ ಮೂರ್ತಿಗಳಿಗಿಂತ ಮಣ್ಣಿನ ಗಣೇಶ ಮೂರ್ತಿಗಳನ್ನೇ ಹೆಚ್ಚಾಗಿ ತಯಾರಿಸಲಾಗಿದೆ. ಮಹಾನಗರ ಪಾಲಿಕೆಯ ಕಟ್ಟೆಚ್ಚರದಿಂದಾಗಿ ಗಣೇಶನ ತಯಾರಕರು ಪಿಒಪಿ ತಯಾರಿಕೆಯಿಂದ ದೂರ ಉಳಿದಿದ್ದರು. ಆದಾಗ್ಯೂ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪಿಒಪಿ ಗಣಪಗಳು ಮಾರಾಟಕ್ಕೆ ಬಂದಿದ್ದವು. ದುಬಾರಿಯಾದರೂ ಅನೇಕ ಕಡೆ ಯುವಕರು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆದರು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಗಣಪಗಳ ಪ್ರತಿಷ್ಠಾಪನೆಯಾಗಿದೆ.
ನಗರದ ಕುಂಬಾರ ಓಣಿಯಲ್ಲಿ ಪ್ರತಿವರ್ಷ ನೂರಾರು ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಇಲ್ಲಿ ಮಣ್ಣಿನ ಗಣೇಶಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತಿದೆ.ವಿಸರ್ಜನೆಗೆ ತಯಾರಿ:
ನಗರದ ಬಹುತೇಕ ಗಣೇಶ ಮೂರ್ತಿಗಳು ನಗರದ ಎಚ್‌ಎಲ್‌ಸಿ ಕಾಲುವೆಯಲ್ಲಿ ವಿಸರ್ಜನೆಯಾಗುತ್ತವೆ. ಬೆಂಗಳೂರು ಬೈಪಾಸ್ ರಸ್ತೆ, ಅಲ್ಲೀಪುರ ಮಹಾದೇವತಾತ ದೇವಸ್ಥಾನ ಹಿಂಭಾಗ, ತಾಳೂರು ರಸ್ತೆ, ಹವಾಂಭಾವಿ ಪ್ರದೇಶ, ಕೊಳಗಲ್ಲು ಬಳಿಯ ಏರ್‌ಫೋರ್ಟ್ ರಸ್ತೆ, ಕಪ್ಪಗಲ್ ರಸ್ತೆಯಲ್ಲಿ ಬರುವ ಎಚ್‌ಎಲ್‌ಸಿ ಕಾಲುವೆಯಲ್ಲಿ ವಿಸರ್ಜನೆಗೊಳ್ಳುತ್ತಿದ್ದು, ಇದಕ್ಕಾಗಿ ಪಾಲಿಕೆ ಕ್ರೇನ್ ಹಾಗೂ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದೆ.ದೊಡ್ಡಗಾತ್ರದ ಗಣೇಶಮೂರ್ತಿ ವಿಸರ್ಜನೆ ವೇಳೆ ಅವಘಡ ಸಂಭವಿಸಬಾರದು ಎಂಬ ಕಾರಣಕ್ಕಾಗಿಯೇ ಪಾಲಿಕೆ ವಿಸರ್ಜನೆಯ ಜವಾಬ್ದಾರಿ ಹೊತ್ತಿದೆ. ಐದನೇ ದಿನಕ್ಕೆ ಹೆಚ್ಚಿನ ಗಣೇಶಗಳು ವಿಸರ್ಜನೆಯಾಗಲಿವೆ. ಗಣೇಶನ ವಿಸರ್ಜನೆ ವೇಳೆ ಯಾವುದೇ ಗಲಾಟೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮ ವಹಿಸಿದ್ದಾರೆ.