-ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಂಭ್ರಮ
------ಕನ್ನಡಪ್ರಭ ವಾರ್ತೆ, ಹುಣಸಗಿ
ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಿಪ್ಪಣ್ಣ ನಾಯಕ ರಾಠೋಡ ಅಧ್ಯಕ್ಷರಾಗಿ ಹಾಗೂ ಶಾಂತಣ್ಣ ಮಲಗಲದಿನ್ನಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ನಾಮಪತ್ರ ಸಲ್ಲಿಸಿದ ಮೇಲೆ ಯಾವೊಬ್ಬ ಸದಸ್ಯ ನಾಮಪತ್ರ ಸಲ್ಲಿಸದೆ, ಕಣದಿಂದ ದೂರ ಉಳಿದಿದ್ದರಿಂದ ಚುನಾವಣೆ ಅಧಿಕಾರಿಗಳಾದ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರು ನಿಗದಿತ ಕಾಲ ಮಿತಿಯೊಳಗೆ ಚುನಾವಣೆ ಪ್ರಕ್ರಿಯೆ ಕೈಗೊಂಡು ಚುನಾವಣೆ ಕಣದಲ್ಲಿದ್ದ ತಿಪ್ಪಣ್ಣ ನಾಯಕ ರಾಠೋಡ ವಿರುದ್ಧ ಸ್ಪರ್ಧಿಸಲು ಸ್ಪರ್ಧಾಳುಗಳು ಇಲ್ಲದಿದ್ದರಿಂದ ಅಧ್ಯಕ್ಷರಾಗಿ ತಿಪ್ಪಣ್ಣ ನಾಯಕ ರಾಠೋಡ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು. ಶಾಂತಣ್ಣ ಮಲಗಲದಿನ್ನಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಒಟ್ಟು 16 ಪಟ್ಟಣ ಪಂಚಾಯ್ತಿ ಸದಸ್ಯರ ಪೈಕಿ 14 ಕಾಂಗ್ರೆಸ್ ಪಕ್ಷದ ಸದಸ್ಯರ ಬಲದಿಂದ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಂತಾಗಿದೆ. ನೂತನ ಅಧ್ಯಕ್ಷ ತಿಪ್ಪಣ್ಣ ರಾಠೋಡ ಮಾತನಾಡಿ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುವ ಮೂಲಕ ಎಲ್ಲಾ ವಾರ್ಡ್ ಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ಸರ್ವ ಸದಸ್ಯರು ಆಡಳಿತ ಮಂಡಳಿ ಸಹಕಾರದೊಂದಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೆ ವಾರ್ಡ್ ಸದಸ್ಯರ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಸ್ಪಂದಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣ ಅಭಿವೃದ್ಧಿ ಮಾಡಿ ನಮ್ಮ ತಂದೆ ದಿ. ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಹೆಸರು ಉಳಿಸುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಂತರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ಅವರಿಂದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು.ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ನಾಗಣ್ಣ ದಂಡಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ. ರೇವಡಿ, ರಾಜಾ ಸಂತೋಷ್ ನಾಯಕ, ಶರಣು ದಂಡಿನ್, ಸಿದ್ರಾಮಪ್ಪ ಮುದಗಲ್, ಬಾಪುಗೌಡ ಪಾಟೀಲ್, ಬಸವರಾಜ ಸಜ್ಜನ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಭೀಮವ್ವ ಟಿ. ಕಡಿಮನಿ, ಮರಲಿಂಗಪ್ಪ ನಾಟೇಕಾರ ಸೇರಿದಂತೆ ಇತರರಿದ್ದರು.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಬೆಂಬಲಿತ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.-----
8ವೈಡಿಆರ್3: ಹುಣಸಗಿ ಪಟ್ಟಣ ಪಂಚಾಯ್ತಿಯ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಿಪ್ಪಣ್ಣ ನಾಯಕ (ಅಧ್ಯಕ್ಷ) ಹಾಗೂ ಶಾಂತಣ್ಣ ಮಲಗಲದಿನ್ನಿ (ಉಪಾಧ್ಯಕ್ಷ) ಅವರನ್ನು ಸನ್ಮಾನಿಸಲಾಯಿತು.------