ಪಾರಂಪರಿಕ ಸಂಗೀತೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Sep 10, 2024, 01:37 AM IST
14 | Kannada Prabha

ಸಾರಾಂಶ

ಕಲಾವಿದರ ಮೂಲಕ ಸಂಗೀತ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಆರು ದಶಕಗಳಿಂದ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ವಿವಿ ಮೊಹಲ್ಲಾ 8ನೇ ಕ್ರಾಸ್‌ ನ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ) ಆಯೋಜಿಸಿರುವ 63ನೇ ‘ಪಾರಂಪರಿಕ ಸಂಗೀತೋತ್ಸವಕ್ಕೆ ಭಾನುವಾರ ಚಾಲನೆ ದೊರಕಿತು.

ವಿದುಷಿ ಸೂರ್ಯಗಾಯತ್ರಿ, ಟ್ರಸ್ಟ್‌ ಅಧ್ಯಕ್ಷ ಎಂ. ಜಗನ್ನಾಥ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಅವರು, ಕಲಾವಿದರ ಮೂಲಕ ಸಂಗೀತ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಆರು ದಶಕಗಳಿಂದ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವ್ಯಕ್ತಿಯು ಕಲಾವಿದನಾಗಿ ರೂ‍ಪುಗೊಳ್ಳುವುದಕ್ಕೆ ಬಹಳ ವರ್ಷದ ಪರಿಶ್ರಮವಿರುತ್ತದೆ. ಕಲೆ ಒಲಿಯುವುದು ಸುಲಭವಲ್ಲ. ಅದು ತಪಸ್ಸಿನಂತೆ. ಅದು ಸಿದ್ಧಿಸಿದ ನಂತರ ಕಲಾವಿದನಷ್ಟೇ ಅಲ್ಲ, ಕಲೆ ಹಾಗೂ ಸಮಾಜವೂ ಬೆಳಗುತ್ತದೆ ಎಂದು ಹೇಳಿದರು.

ಅಮರವಾದ ಕಲೆಯ ಜೊತೆ ಬೆರೆತ ಕಲಾವಿದನ ಜೀವ ಮತ್ತು ಜೀವನ ಪಾವನವಾದದ್ದು, ಅದು ಸಮಾಜಕ್ಕೆ ಎಂದೂ ಹಾಗೂ ಎಲ್ಲಿಯೂ ಸಣ್ಣ ಸೂಜಿಮೊನೆಯಷ್ಟೂ ಕೆಡುಕು ಉಂಟು ಮಾಡುವುದಿಲ್ಲ. ಸೌಹಾರ್ದ ಹಾಗೂ ಜೀವಪ್ರೀತಿ ಕಲಿಸುತ್ತದೆ ಎಂದರು.

ಕಲೆಯು ಒಮ್ಮೆ ಸಿದ್ಧಿಸಿದರೆ, ಕಲಾವಿದರ ಜೀವನದಲ್ಲಿನ ತಪ್ಪುಗಳೆಂಬ ಪುಟಗಳೇ ಮಾಯವಾಗುತ್ತವೆ. ಸಮಾಜಕ್ಕೆ ಬೇಕಾಗುವ ಕಲೆಯನ್ನು ನೀಡುವಲ್ಲಿ ನಿರತರಾದ ಅಪರೂಪದ ಪ್ರತಿಭೆಯನ್ನು ವಿ.ವಿ. ಮೊಹಲ್ಲಾದ 8ನೇ ಕ್ರಾಸ್‌ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ ಶೆಣೈ, ಜನರ ಸಹಕಾರದಿಂದಲೇ ಬಹುದೊಡ್ಡ ಉತ್ಸವ ನಡೆಯುತ್ತಿದೆ. ಈ ಕಾರ್ಯ ನಿರಂತರವಾಗಿರುತ್ತದೆ. ರಸ– ಭಾವ ಎಲ್ಲವೂ ಸಂಗೀತದಿಂದ ಸಿಗುತ್ತದೆ. ಈ ರುಚಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಸಂಗೀತ ಪ್ರಿಯರದ್ದಾಗಿದೆ ಎಂದರು.

ಟ್ರಸ್ಟ್‌ ಕಾರ್ಯದರ್ಶಿ ಸಿ.ಆರ್‌. ಹಿಮಾಂಶು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ