ಅಕ್ಕಿಆಲೂರು: ಗ್ಯಾಂಗ್‌ ರೇಪ್‌ ಆರೋಪಿಗಳನ್ನು ಗಲ್ಲಿಗೇರಿಸಲು ಒತ್ತಾಯ

KannadaprabhaNewsNetwork |  
Published : Jan 21, 2024, 01:34 AM ISTUpdated : Jan 21, 2024, 01:43 PM IST
೨೦ಎಚ್‌ಯುಬಿ-ಎಕೆಎಲ್೧: | Kannada Prabha

ಸಾರಾಂಶ

ಸಾಮೂಹಿಕ ಅತ್ಯಾಚಾರ ಮತ್ತು ನೈತಿಕ ಪೊಲೀಸ್‌ಗಿರಿ ಖಂಡಿಸಿ ಅಕ್ಕಿಆಲೂರಿನ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ಇತ್ತೀಚೆಗೆ ಹಾನಗಲ್‌ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ನೈತಿಕ ಪೊಲೀಸ್‌ಗಿರಿ ಖಂಡಿಸಿ ಅಕ್ಕಿಆಲೂರಿನ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ಪಟ್ಟಣದ ಶ್ರೀ ಚನ್ನವೀರೇಶ್ವರ ವಿರಕ್ತಮಠದ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬಡಾವಣೆಗಳ ಮೂಲಕ ಸಂಚರಿಸಿ ಸಿಂಧೂರ ಸಿದ್ಧಪ್ಪ ವೃತ್ತದಲ್ಲಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸಂಪನ್ನಗೊಂಡಿತು.

ಪ್ರತಿಭಟನೆಯಲ್ಲಿ ಎಲ್ಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕು ಎಂಬ ಕೂಗು ಪ್ರತಿಭಟನೆಯುದ್ಧಕ್ಕೂ ಕೇಳಿಬಂತು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ್ ಹೋಸಕೇರಾ, ಇತ್ತೀಚೆಗೆ ಅವ್ಯಾಹತವಾಗಿ ನಡೆದಿರುವ ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳು ಸಮುದಾಯವನ್ನು ಬೆಚ್ಚಿ ಬೀಳಿಸಿವೆ. 

ಸರ್ಕಾರ ಇದೆಲ್ಲವನ್ನೂ ಅತ್ಯಂತ ಲಘುವಾಗಿ ಪರಿಗಣಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ಮನೆಯ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವ ಆತಂಕ ಎಲ್ಲೆಡೆ ಆವರಿಸುತ್ತಿದೆ. ಇತ್ತೀಚೆಗೆ ತಾಲೂಕಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಮಹಿಳೆಯರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಮತ್ತು ಪರೋಕ್ಷವಾಗಿ ಇಂತಹ ಹೇಯ ಕೃತ್ಯಗಳಿಗೆ ಸಹಕರಿಸುತ್ತಿರುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. 

ಇದೇ ಮಾದರಿಯಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ಉಂಟಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣುಕು ಹರಿದಾಡುತ್ತಿದ್ದು, ಪೊಲೀಸ್ ಇಲಾಖೆ ಈ ಕುರಿತು ತನಿಖೆ ಕೈಗೊಳ್ಳಬೇಕಿದೆ. 

ಅತ್ಯಾಚಾರ ಪ್ರಕರಣದಲ್ಲಿ ನೋಂದ ಸಹೋದರಿಗೆ ನ್ಯಾಯ ಒದಗಿಸಿ ಸೂಕ್ತ ರಕ್ಷಣೆ ನೀಡಬೇಕು. ತನಿಖಾಧಿಕಾರಿಗಳ ಮೇಲೆ ಯಾವುದೇ ಒತ್ತಡ ಹೇರದೇ ಇನ್ನು ಮುಂದೆ ಇಂತಹ ಹೇಯ ಕೃತ್ಯ ನಡೆಯದಂತೆ ಎಚ್ಚರ ವಹಿಸಬೇಕು. ಈ ಪ್ರಕರಣವನ್ನು ಆದಷ್ಟು ಬೇಗ ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಜಿಪಂ ಸದಸ್ಯರಾದ ಮಾಲತೇಶ ಸೊಪ್ಪಿನ, ಕೃಷ್ಣ ಈಳಗೇರ, ಉದಯಕುಮಾರ ವಿರುಪಣ್ಣನವರ, ಶಿವಕುಮಾರ ದೇಶಮುಖ, ನಾಗರಾಜ ಪಾವಲಿ, ಹರೀಶ ಹಾನಗಲ್ಲ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ