ಗಂಗಾವತಿ ಕಾಂಗ್ರೆಸ್ಸಿನಲ್ಲಿ ಹೆಚ್ಚಿದ ಗುಂಪುಗಾರಿಕೆ

KannadaprabhaNewsNetwork |  
Published : May 21, 2026, 02:30 AM IST
ಸಸಸಸ | Kannada Prabha

ಸಾರಾಂಶ

ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಗುಂಪು ಮೂರು ಪಂಗಡಗಳಾಗಿವೆ

ರಾಮಮೂರ್ತಿ ನವಲಿ ಗಂಗಾವತಿ

ಗಂಗಾವತಿ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್‌ ಪಕ್ಷ ನಾವಿಕ ಇಲ್ಲದ ಹಡಗಿನಂತಾಗಿದೆ. ಈಗಾಗಲೇ ಕಾಂಗ್ರೆಸ್‌ ಮೂರು ಗುಂಪುಗಳಿದ್ದು, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ದಿ. ಶ್ರೀರಂಗದೇವರಾಯಲು ಶಾಸಕರಾದ ನಂತರ ಯಾರೂ ಚುನಾಯಿತರಾಗಿಲ್ಲ. ಈಗಿರುವ ಕಾಂಗ್ರೆಸ್ ಮುಖಂಡರ ಭಿನ್ನಮತ, ಕಚ್ಚಾಟ, ಆರೋಪ ಪ್ರತ್ಯಾರೋಪ, ಬೇರೆ ಪಕ್ಷದವರೊಂದಿಗೆ ಶಾಮೀಲು ಸೇರಿದಂತೆ ಪಕ್ಷದ ಅಂತರಿಕ ಜಗಳದಿಂದ ಕ್ಷೇತ್ರದಲ್ಲಿ ಪಕ್ಷ ನೆಲಕಚ್ಚಿದೆ.

ನಗರದಲ್ಲಿ ಕಾಂಗ್ರೆಸ್‌ ಮುಖಂಡರ ಗುಂಪುಗಾರಿಕೆ ಮುಂದುವರಿದಿದೆ. ಪಕ್ಷ ಸಂಘಟನೆಯಲ್ಲಿ ಗುಂಪುಗಾರಿಕೆ, ಬೂತಮಟ್ಟದ ಸದಸ್ಯರ ಅಭಿಯಾನ, ಕಾರ್ಯಕರ್ತರ ನೇಮಕಾತಿ, ವರ್ಗಾವಣೆ ಸೇರಿದಂತೆ ಇತರ ವಿಷಯಗಳಲ್ಲಿ ಗುಂಪುಗಾರಿಕೆ ನಡೆದಿರುವುದು ಹೊಸದೇನಲ್ಲ. ಕಳೆದ ವಾರದಿಂದ ಮುಖಂಡರುಗಳ ವಾಕ್ಸಮರ ನಡೆದಿರುವುದು ಭಿನ್ನಮತಕ್ಕೆ ಪುಷ್ಠಿ ನೀಡಿದೆ.

ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಗುಂಪು ಮೂರು ಪಂಗಡಗಳಾಗಿವೆ.

ಅನ್ಸಾರಿ ಈಗ ಬೆಂಗಳೂರಿನಲ್ಲಿದ್ದು ಪಕ್ಷ ನಿರ್ಲಕ್ಷಿಸಿದ್ದಾರೆ ಎಂಬ ಕಾರಣಕ್ಕೆ ಬೂತ್ ಮಟ್ಟದ ಉಸ್ತುವಾರಿಗೆ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ನೇಮಕ ಮಾಡಿರುವುದು ಅನ್ಸಾರಿ ಸಿಡಿಮಿಡಿಗೆ ಕಾರಣವಾಗಿದೆ.

ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಬೆಂಬಲಿಗರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ತಾವು ಹೇಳಿದ ಕಾರ್ಯಕರ್ತರಿಗೆ ನಾಮನಿರ್ದೇಶನ ಮಾಡದೇ ಇರುವದು ಕೆಪಿಸಿಸಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.

ಕಾರ್ಯಕರ್ತರು ತ್ರಿಶಂಕು:ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ಒಳ ಜಗಳದಿಂದ ಕಾರ್ಯಕರ್ತರಿಗೆ ತ್ರಿಶಂಕು ಸ್ಥಿತಿ ಒದಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಪರಿಸ್ಥಿತಿ ಬಂದಾಗ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅನ್ಯ ಪಕ್ಷಕ್ಕೆ ಬೆಂಬಲಿಸಿ ಪಲಾಯನ ಮಾಡಿದ್ದರು. ಈಗ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಡೋಲಾಯಮಾನವಾಗಿದೆ. ಇದರಿಂದಾಗಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ನಾವಿಕ ಇಲ್ಲದ ಹಡಗಿನಂತಾಗಿದೆ.

ಗಂಗಾವತಿ ಕ್ಷೇತ್ರದಲ್ಲಿ ಮುಖಂಡರೊಬ್ಬರು ದಿನಕ್ಕೊಂದು ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವರಿಷ್ಠರು ಇವರ ಬಗ್ಗೆ ಗಮನಹರಿಸುತ್ತಿದ್ದಾರೆ. ಗಂಗಾವತಿ ಕ್ಷೇತ್ರದ ಬಿಎಲ್ 2 ನೇಮಕ ಮಾಡುವ ಕುರಿತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಎರಡು ಮೂರು ಬಾರಿ ಸಂಪರ್ಕಿಸಿದ್ದೇನೆ. ಅವರು ಸರಿಯಾದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿಲ್ಲ. ಈ ಕಾರಣಕ್ಕೆ ವರಿಷ್ಠರ ಜತೆ ಮಾತನಾಡಿ ಈ ಸ್ಥಾನಕ್ಕೆ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ಶಿಫಾರಸ್ಸುಮಾಡಿದೆ. ಪಕ್ಷದ ಡ್ಯಾಮೇಜ್ ಹೇಳಿಕೆ ಸರಿಯಲ್ಲ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ತಿಳಿಸಿದ್ದಾರೆ.

ಕಾಂಗ್ರೆಸ್ ವರಿಷ್ಠರು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಡೆ ಗಮನ ಹರಿಸುತ್ತಿಲ್ಲ. ಮಖಂಡರಿಗೆ ಬೆಲೆ ಇಲ್ಲದಂತಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭಿನ್ನಮತಕ್ಕೆ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕಾರಣರಾಗಿದ್ದಾರೆ. ಕೂಡಲೇ ಪುನರಚನೆ ಸಂದರ್ಭದಲ್ಲಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಪುರಾತನ ಕಾಲದ ಆಳ್ವರ್‌ ವಿಗ್ರಹ ಪತ್ತೆ
ಕೂಡ್ಲಿಗಿಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಆರೋಪ