ಗಿರಿಜನರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮವು ಮೇ ೨೪ರಂದು ಮಹಾನ್ ಜನನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ೧೫೦ನೇ ಜಯಂತಿ ವರ್ಷದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವನವಾಸಿ ಕಲ್ಯಾಣದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಾಹಿತಿ
ಕನ್ನಡಪ್ರಭ ವಾರ್ತೆ ಯಲ್ಲಾಪುರ ಗಿರಿಜನರ ಸಾಂಸ್ಕೃತಿಕ ಸಮಾಗಮ ಕಾರ್ಯಕ್ರಮವು ಮೇ ೨೪ರಂದು ಮಹಾನ್ ಜನನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ೧೫೦ನೇ ಜಯಂತಿ ವರ್ಷದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾಗಿದೆ ಎಂದು ವನವಾಸಿ ಕಲ್ಯಾಣದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಲು ದೇಶದ ಎಸ್.ಟಿ ಸಮಯದಾಯದ ೫೦೦ ಜನಜಾತಿಗಳಿಂದ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ದೇಶದ ಎಲ್ಲಾ ರಾಜ್ಯಗಳಿಂದ ಆಗಮಿಸುವ ಗಿರಿಜನರು ತಮ್ಮದೇ ಗುರುತಾದ ಉಡುಗೆ, ತೊಡುಗೆ, ವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದು ಸಂಸ್ಕೃತಿಯ ಪ್ರತಿಬಿಂಬವಾಗಲಿದೆ ಎಂದರು.ತಮ್ಮ ಧರ್ಮ-ಸಂಸ್ಕೃತಿ ಮತ್ತು ಪರಂಪರೆಯ ವಿಷಯದಲ್ಲಿ ಗಿರಿಜನ ಸಮಾಜವು ದೇಶದ ರಾಜಧಾನಿಯಾದ ದೆಹಲಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೊದಲ ಬಾರಿಗೆ ಒಂದಾಗುತ್ತಿದೆ. ವಿವಿಧ ಸ್ಥಳಗಳಿಂದ ಹೊರಟ ಎಲ್ಲ ಶೋಭಾಯಾತ್ರೆಗಳು ಕೆಂಪುಕೋಟೆ ಆವರಣದಲ್ಲಿ ಒಂದಾಗಲಿವೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಗಿರಿಜನರ ವಿಶಿಷ್ಟ ಪ್ರತಿನಿಧಿಗಳು, ಸಾಧಕರು, ಮುಖಂಡರು ವಿಷಯಗಳನ್ನು ಮಂಡಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಹಾಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.ದೆಹಲಿಯಲ್ಲಿ ವಿವಿಧ ವ್ಯವಸ್ಥೆಗಳಿಗಾಗಿ ೨೦ ವಿಭಾಗ ರಚಿಸಲಾಗಿದ್ದು, ಅನೇಕ ಸಮಿತಿಗಳನ್ನೂ ಸ್ಥಾಪಿಸಲಾಗಿದೆ. ದೆಹಲಿಯ ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ವಸತಿ, ಆಹಾರ-ನೀರು, ಸಾರಿಗೆ, ವೈದ್ಯಕೀಯ ಮತ್ತು ಸ್ವಚ್ಛತಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.
ವನವಾಸಿ ಕಲ್ಯಾಣದ ರಾಜ್ಯ ಸಂಚಾಲಕ ದೋಂಡು ಪಾಟೀಲ ಮಾತನಾಡಿ, ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ೧೫೦೦ಕ್ಕೂ ಹೆಚ್ಚು ಗಿರಿಜನರು ಭಾಗವಹಿಸಲಿದ್ದಾರೆ. ಗಿರಿಜನರೆಲ್ಲ ಒಂದಾಗಿ ಮತಾಂತರದ ಪಿಡುಗನ್ನು ದೂರಗಟ್ಟುವಂತಾಗಬೇಕೆಂಬ ಆಶಯ ನಮ್ಮದು ಎಂದರು. ಜಿಲ್ಲಾ ಸಂಚಾಲಕ ಸಿದ್ದು ಜೋರೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.