ಹುಲಿ ಹುಡುಕಲು ಇಟ್ಟ ಕ್ಯಾಮೆರಾಗಳೇ ಕಳ್ಳರ ಪಾಲು!

KannadaprabhaNewsNetwork |  
Published : May 21, 2026, 02:30 AM IST
ಸಾಂದರ್ಬಿಕ ಚಿತ್ರ. | Kannada Prabha

ಸಾರಾಂಶ

ಉಕ ಜಿಲ್ಲೆಯ ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಹುಲಿ ಗಣತಿ ಕಾರ್ಯಕ್ಕೆ ಇದೀಗ ಕ್ಯಾಮೆರಾ ಕಳ್ಳತನ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹುಲಿ ಗಣತಿ ಅಧ್ಯಯನಕ್ಕೆ ಅಡ್ಡಿ: ಟ್ರ್ಯಾಪ್ ಕ್ಯಾಮೆರಾಗಳ ಮೇಲೆ ಬಿತ್ತು ಕಳ್ಳರ ಕಣ್ಣು

ಅರಣ್ಯ ಇಲಾಖೆಗೆ ಹೊಸ ತಲೆನೋವು: ಗಣತಿ ಕ್ಯಾಮೆರಾ ಕಳವು

ಹುಲಿ ಗಣತಿ ವೇಳೆ ಅರಣ್ಯ ಇಲಾಖೆಗೆ ಭದ್ರತಾ ಸವಾಲುರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಉಕ ಜಿಲ್ಲೆಯ ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಹುಲಿ ಗಣತಿ ಕಾರ್ಯಕ್ಕೆ ಇದೀಗ ಕ್ಯಾಮೆರಾ ಕಳ್ಳತನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆಯು ಹುಲಿಗಳ ಸಂಚಾರ, ಸಂಖ್ಯೆ ಹಾಗೂ ವಾಸಸ್ಥಾನದ ಅಧ್ಯಯನಕ್ಕಾಗಿ ಅರಣ್ಯದ ವಿವಿಧ ಭಾಗಗಳಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾಗಳು ಕಳ್ಳತನವಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದರಿಂದ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.

ಹುಲಿ ಗಣತಿ ಕಾರ್ಯವು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಯೋಜನೆಗಳ ಪ್ರಮುಖ ಭಾಗವಾಗಿದ್ದು, ಅರಣ್ಯದಲ್ಲಿ ಹುಲಿಗಳ ಅಸ್ತಿತ್ವ ಮತ್ತು ಚಲನವಲನಗಳನ್ನು ವೈಜ್ಞಾನಿಕವಾಗಿ ದಾಖಲಿಸಲು ಕ್ಯಾಮೆರಾ ಟ್ರ್ಯಾಪ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಾಣಿಗಳ ಸಂಚರಣೆ ನಡೆಯುವ ದಾರಿಗಳು, ನೀರಿನ ಮೂಲಗಳು ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಕ್ಯಾಮೆರಾಗಳು ನಾಪತ್ತೆಯಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಸಿಬ್ಬಂದಿ ನೀಡಿದ ಮಾಹಿತಿಯಂತೆ, ಕೆಲವು ಕ್ಯಾಮೆರಾಗಳು ಅರಣ್ಯದ ಒಳಭಾಗದಲ್ಲೇ ಕಳ್ಳತನವಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ನಷ್ಟವಾಗುತ್ತಿರುವುದಲ್ಲದೆ, ಹಲವು ದಿನಗಳ ಕಾಲ ಸಂಗ್ರಹವಾಗಿದ್ದ ವನ್ಯಜೀವಿಗಳ ಮಾಹಿತಿಯೂ ಕಳೆದುಹೋಗುವಂತಾಗಿದೆ.ಹುಲಿ ಗಣತಿ ಸಾಮಾನ್ಯ ಸಮೀಕ್ಷೆಯಲ್ಲ;

ಇದು ಅರಣ್ಯ ಪರಿಸರದ ಆರೋಗ್ಯದ ಸೂಚಕವೂ ಆಗಿದೆ. ಹುಲಿಗಳ ಸಂಖ್ಯೆ ಮತ್ತು ಅವುಗಳ ಚಲನವಲನಗಳ ಆಧಾರದ ಮೇಲೆ ಅರಣ್ಯ ಸಂಪತ್ತಿನ ಸ್ಥಿತಿ ಅಂದಾಜಿಸಲಾಗುತ್ತದೆ. ಈ ಹಿನ್ನೆಲೆ ಕ್ಯಾಮೆರಾ ಕಳ್ಳತನದ ಘಟನೆಗಳು ಇಲಾಖೆಯ ಕಾರ್ಯಪದ್ಧತಿಗೆ ಧಕ್ಕೆ ತರುತ್ತಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಅರಣ್ಯ ಅಧಿಕಾರಿಗಳು ಈಗ ಹೆಚ್ಚುವರಿ ನಿಗಾ ಕ್ರಮ ಕೈಗೊಂಡಿದ್ದು, ಅರಣ್ಯ ಸಿಬ್ಬಂದಿಯಿಂದ ನಿಯಮಿತ ಪೆಟ್ರೋಲಿಂಗ್ ನಡೆಸಲಾಗುತ್ತಿದೆ. ಜೊತೆಗೆ ಕ್ಯಾಮೆರಾ ಅಳವಡಿಸುವ ಸ್ಥಳಗಳ ಮಾಹಿತಿಯನ್ನು ಗೌಪ್ಯವಾಗಿಡಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಪ್ರದೇಶಗಳಲ್ಲಿ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನೂ ಬಳಸುವ ಕುರಿತು ಚಿಂತನೆ ನಡೆದಿದೆ.

ಅರಣ್ಯ ಇಲಾಖೆ ಕ್ಯಾಮೆರಾ ಕಳ್ಳತನ ಪ್ರಕರಣಗಳ ಕುರಿತು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದೆ. ಹಾಗೆ ಪೊಲೀಸ್ ಇಲಾಖೆಯು ಸಹ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಳ್ಳರ ಪತ್ತೆಗೆ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದೆ.

ಹುಲಿ ಗಣತಿಗಾಗಿ ಅಂಕೋಲಾ ಹಾಗೂ ಕಾರವಾರಕ್ಕೆ ಸೇರಿ ಒಟ್ಟು 250 ಕ್ಯಾಮೆರಾಗಳನ್ನು ಟೈಗರ್ ಮೊನಿಟರಿಂಗ್ ಸೆಲ್‌ನವರು ನೀಡಿದ್ದರು. ತಾಲೂಕಿನ ವಿವಿಧ ಭಾಗಗಳಲ್ಲಿ 25 ದಿನಗಳ ಅಧ್ಯಯನಕ್ಕಾಗಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೇ 25ಕ್ಕೆ ಗಣತಿ ಕೊನೆಗೊಳ್ಳುವುದಿತ್ತು. ಹೀಗಿರುವಾಗ ಕ್ಯಾಮೆರಾ ಕಳ್ಳತನವಾಗಿರುವುದು ಕಂಡು ಬಂದಿದೆ ಎಂದು ಅಂಕೋಲಾದ ಎ.ಸಿ.ಎಫ್. ಜಯೇಶ ಹೇಳಿದ್ದಾರೆ.2 ಕ್ಯಾಮೆರಾ ಕಳ್ಳತನ:

ಹುಲಿ ಗಣತಿ ಕಾರ್ಯ ನಡೆಸಲು ಅಂಕೋಲಾದ ಹೊಸಕಂಬಿ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾದ 2 ಕ್ಯಾಮೆರಾ ಕಳ್ಳತನವಾಗಿದೆ ಎಂದು ಪೊಲೀಸ್ ದೂರು ದಾಖಲಾಗಿದೆ.

ಮೇ 1ರಿಂದ 25ರವರೆಗೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್ ಕಾರ್ಯಾಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಹೊಸಕಂಬಿ ವಲಯದ ಮಾಣಿಕಾರ ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ ಕಡಿಬ್ಯಾಕ್ ಕಂಪನಿಯ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರತಿ ಐದು ದಿನಗಳಿಗೊಮ್ಮೆ ಕ್ಯಾಮೆರಾದ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿನ ಮಾಹಿತಿಯನ್ನು ರೇಂಜ್ ಫಾರೆಸ್ಟ್ ಕಚೇರಿಯ ಕಂಪ್ಯುಟರಿನಲ್ಲಿ ದಾಖಲು ಮಾಡಲಾಗುತ್ತಿತ್ತು. ಮೇ 11ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾ ಅಲ್ಲಿಯೇ ಇತ್ತು.

ಆದರೆ, ಮೇ 13ರಂದು ಕರ್ತವ್ಯಕ್ಕೆ ಹೋದ ಸಿಬ್ಬಂದಿಗೆ ಕ್ಯಾಮೆರಾ ಕಾಣಿಸಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಈ ಹಿನ್ನೆಲೆ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸುಮಾರು 1 ಲಕ್ಷ ಮೌಲ್ಯದ ಎರಡು ಕ್ಯಾಮೆರಾ ಕಾಣೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ದೂರು ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಪುರಾತನ ಕಾಲದ ಆಳ್ವರ್‌ ವಿಗ್ರಹ ಪತ್ತೆ
ಕೂಡ್ಲಿಗಿಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಆರೋಪ