ಗ್ಯಾಸ್‌ ಗಾಗಿ ಮಧ್ಯರಾತ್ರಿಯಿಂದಲೇ ಪಾಳಿ

KannadaprabhaNewsNetwork |  
Published : Mar 26, 2026, 01:30 AM IST
25 ಟಿವಿಕೆ 1 – ತುರುವೇಕೆರೆಯ ಗ್ಯಾಸ್ ಅಂಗಡಿಯ ಮುಂದೆ ನಿಂತಿರುವ ಜನರು | Kannada Prabha

ಸಾರಾಂಶ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚು ಗ್ರಾಮಗಳ ಮನೆ ಮನೆಗಳಲ್ಲೂ ಬಿಸಿ ಮುಟ್ಟಿಸಿ ತಲ್ಲಣ ಉಂಟು ಮಾಡುತ್ತಿದೆ.

ಎಸ್.ನಾಗಭೂಷಣ

ಕನ್ನಡಪ್ರಭವಾರ್ತೆ, ತುರುವೇಕೆರೆ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚು ಗ್ರಾಮಗಳ ಮನೆ ಮನೆಗಳಲ್ಲೂ ಬಿಸಿ ಮುಟ್ಟಿಸಿ ತಲ್ಲಣ ಉಂಟು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನೆ ಬಳಕೆಯ ಗ್ಯಾಸ್ ಗೆ ಸಮಸ್ಯೆ ಇಲ್ಲ ಎಂದು ಸಾರಿ ಸಾರಿ ಹೇಳಿದರೂ ಸಹ ಜನರ ಆತಂಕ ಮಾತ್ರ ದೂರವಾಗಿಲ್ಲ. ಬೆಳಗ್ಗೆ 10 ಗಂಟೆಯಿಂದ ಗ್ಯಾಸ್ ಕೊಡುವ ಸಮಯ ಆರಂಭ. ಆದರೆ ಗ್ಯಾಸ್ ಏಜೆನ್ಸಿಯ ಮುಂದೆ ಜನರು ಮಧ್ಯರಾತ್ರಿಯಿಂದಲೇ ಗ್ಯಾಸ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನಿನ್ನೆ ರಾತ್ರಿ ಸುಮಾರು 3 ಗಂಟೆಯಿಂದಲೇ ಗ್ಯಾಸ್ ಏಜೆನ್ಸಿಯ ಬಳಿ ಜನರು ಜಮಾಯಿಸತೊಡಗಿದರು. ತಾಲೂಕಿನಲ್ಲಿ ಒಟ್ಟು 35 ಸಾವಿರಕ್ಕೂ ಹೆಚ್ಚು ಅಡುಗೆ ಅನಿಲದ ಬಳಕೆದಾರರಿದ್ದಾರೆ. ಇವರಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಆಕ್ಟಿವ್ ಆಗಿರುವ ಗ್ರಾಹಕರಾಗಿದ್ದಾರೆ. ಪ್ರತಿ ದಿನ ಕನಿಷ್ಠವೆಂದರೂ 500 ರಿಂದ 550 ಮಂದಿ ಮಾತ್ರ ಸಿಲೆಂಡರ್ ಬುಕ್ ಮಾಡುತ್ತಿದ್ದರು. ಆದರೆ ಯುದ್ಧದ ಭೀತಿಯ ಪರಿಣಾಮ ಕೇವಲ ಮೂರ್ನಾಲ್ಕು ದಿನಕ್ಕೆ ಸುಮಾರು ಆರು ಸಾವಿರ ಮಂದಿ ಸಿಲೆಂಡರ್ ಬುಕ್ ಮಾಡಿದ್ದಾರೆ. ಮಧ್ಯರಾತ್ರಿಯಿಂದ ನಿಂತಿದ್ದರೂ ಸಹ ನಮಗೆ ಸಿಲೆಂಡರ್ ಕೊಟ್ಟಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ. ಆದರೆ ಅವರದ್ದು ಬುಕ್ ಆಗಿರುವುದಕ್ಕೆ ಓಟಿಪಿ ಬಂದಿರುವುದಿಲ್ಲ. ಹಾಗಾಗಿ ರಾತ್ರಿ ಇಡೀ ಕಾದಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಏಜೆನ್ಸಿಯವರು ಸಿಲೆಂಡರ್ ಗೆ ಏನೇನೂ ಸಮಸ್ಯೆ ಇಲ್ಲ. ಸಾಕಷ್ಟು ಸ್ಟಾಕ್ ಇದೆ. ಆದರೆ ಸರ್ವರ್ ಸಮಸ್ಯೆಯಿಂದ ನಮಗೆ ಸಿಲೆಂಡರ್ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಏಜೆನ್ಸಿಯವರು ತಮ್ಮ ಅಸಹಾಯಕತೆಯನ್ನು ಜನರ ಎದುರು ಹೇಳಿಕೊಳ್ಳುತ್ತಿದ್ದಾರೆ. ಇತ್ತ ಜನರು ಬಿಸಿಲಿನಲ್ಲೂ ನಿಲ್ಲುವುದನ್ನು ಕಂಡಿರುವ ಏಜೆನ್ಸಿಯವರು ಶಾಮಿಯಾನ, ಕುರ್ಚಿ ಹಾಕಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಜನರಿಗೆ ಇಂತಹ ದಿನಗಳ ಒಳಗೆ ನೋಂದಣಿಯಾಗಿರುವವರಿಗೆ ಮಾತ್ರ ಸಿಲೆಂಡರ್ ವಿತರಿಸಲಾಗುತ್ತಿದೆ ಎಂದು ಮೈಕ್ ನಲ್ಲಿ ಅನೌಸ್ ಮಾಡ್ತಾ ಇದ್ದಾರೆ. ಅಲ್ಲದೇ ಅಂಗಡಿ ಮುಂಭಾಗವೇ ಬೋರ್ಡ್ ಸಹ ಹಾಕಿದ್ದಾರೆ. ಆದರೂ ಜನರು ಬಿಸಿಲಿನಲ್ಲಿ ಬೆಂದು ಹೋಗುತ್ತಿದ್ದಾರೆ.

ಗ್ಯಾಸ್ ಸಿಲೆಂಡರ್ ದೊರೆಯುವುದಿಲ್ಲ ಎಂದು ಆತಂಕಗೊಂಡಿರುವ ಗ್ರಾಹಕರು ಬಿಸಿಲನ್ನೂ ಲೆಕ್ಕಿಸದೇ ನಿಂತಿದ್ದಾರೆ. ವಯೋವೃದ್ಧರು, ಮಹಿಳೆಯರು ಎಂಬ ಭೇಧಭಾವವಿಲ್ಲದೇ ನಿಂತು ಸಾಕಾಗಿ ಹೋಗಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಮತ್ತು ಕಛೇರಿಯ ಸಿಬ್ಬಂದಿ ಸಾಕುಸಾಕಾಗಿ ಹೋಗುತ್ತಿದ್ದಾರೆ. ಹಳ್ಳಿಗಳಿಗೆ ಗ್ಯಾಸ್ ಸಿಲೆಂಡರ್ ಹೊತ್ತ ವಾಹನ ಹೋದ ಸಂದರ್ಭದಲ್ಲಿ ವಾಹನವನ್ನು ಅಡ್ಡಗಟ್ಟಿದ ಕೆಲವರು ಗ್ಯಾಸ್ ಬುಕ್ ಆಗಿದೆ. ಓಟಿಪಿ ಬಂದಿಲ್ಲ. ಅದಕ್ಕೆ ನಾವು ಜವಾಬ್ದಾರರಲ್ಲ. ಸಿಲೆಂಡರ್ ಕೊಡಲೇಬೇಕೆಂದು ಪಟ್ಟು ಹಿಡಿದು ಬಲಾತ್ಕಾರವಾಗಿ ಸಿಲೆಂಡರ್ ನ್ನು ಕಿತ್ತುಕೊಂಡ ಸನ್ನಿವೇಶವೂ ನಿರ್ಮಾಣವಾಗಿದೆ. ಅಲ್ಲಿಯ ಸಿಬ್ಬಂದಿಯ ಮೇಲೆ ಸಣ್ಣ ಪುಟ್ಟ ಗಲಾಟೆ, ಕೈಕೈ ಮಿಲಾಯಿಸಿದ ಉದಾಹರಣೆಯೂ ಆಗಿದೆ. ಹಾಗಾಗಿ ನಮ್ಮ ಸಿಬ್ಬಂದಿ ಹಳ್ಳಿಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರ ರಕ್ಷಣೆ ನೀಡಿದರೆ ಮಾತ್ರ ಹಳ್ಳಿಗೆ ಹೋಗುವುದಾಗಿ ಸಿಬ್ಬಂದಿ ಹೇಳುತ್ತಾರೆ ಎಂದು ಏಜನ್ಸಿಯವರು ತಮಗಾಗುತ್ತಿರುವ ಸಮಸ್ಯೆಯನ್ನು ಹೇಳುತ್ತಿದ್ದಾರೆ. ಒಟ್ಟಾರೆ ಗ್ಯಾಸ್ ನ ಸಮಸ್ಯೆ ಇಲ್ಲದಿದ್ದರೂ ಸಹ ಸರ್ವರ್ ನ ಸಮಸ್ಯೆಯಿಂದಾಗಿ ಜನರಿಗೆ ಗ್ಯಾಸ್ ಟ್ರಬಲ್ ಆಗುತ್ತಿದೆ. ಕೂಡಲೇ ಸರ್ವರ್ ಸಮಸ್ಯೆ ಬಗೆಹರಿದರೆ ಇಲ್ಲಿ ಗ್ಯಾಸ್ ಸಮಸ್ಯೆಯೂ ಬಗೆಹರಿದಂತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುದ್ದೆ ಭರ್ತಿಗೆ ಒತ್ತಾಯಿಸಿ ಮಾದಿಗ ಸಮಾಜದಿಂದ ಅಪರ ಡಿಸಿಗೆ ಮನವಿ
ಎಐ ಸೃಷ್ಟಿಸಿದ ಫೋಟೋ ನೋಡಿ ಜನರು ಕಂಗಾಲು; ಅರಣ್ಯ ಇಲಾಖೆ ಹೈರಾಣು..!