ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಪ್ರತಿಭಟನೆ

KannadaprabhaNewsNetwork |  
Published : Mar 26, 2026, 01:30 AM IST
ಫೋಟೋ:೨೫ಕೆಪಿಸೊರಬ-೦೨ : ಸೊರಬ ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಬಸ್ತಿಕೊಪ್ಪ ಗ್ರಾಮದ ಸರ್ವೆ ನಂಬರ್ ೨೪ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಬುಧವಾರ ಬಸ್ತಿಕೊಪ್ಪ ಗ್ರಾಮಸ್ಥರು ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಚಂದ್ರಗುತ್ತಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಬಸ್ತಿಕೊಪ್ಪ ಗ್ರಾಮದ ಸರ್ವೆ ನಂಬರ್ ೨೪ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಬುಧವಾರ ಬಸ್ತಿಕೊಪ್ಪ ಗ್ರಾಮಸ್ಥರು ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಚಂದ್ರಗುತ್ತಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಚಂದ್ರಗುತ್ತಿ ಗ್ರಾಮದ ಗಾಂಧಿ ವೃತ್ತದಿಂದ ಗ್ರಾಮ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನೆ ಜಾಥಾ ನಡೆಸಿದ ಬಸ್ತಿಕೊಪ್ಪ ಗ್ರಾಮಸ್ಥರು, ಗಣಿಗಾರಿಕೆ ಮಾಲೀಕರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಧಿಕ್ಕಾರ ಹಾಕಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಗಣಿಗಾರಿಕೆಯಿಂದಾಗಿ ನಮ್ಮ ಗ್ರಾಮದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದಿನವಿಡೀ ಕೇಳಿಬರುವ ಕರ್ಕಶ ಶಬ್ದ ಹಾಗೂ ಅವ್ಯಾಹತವಾಗಿ ನಡೆಯುತ್ತಿರುವ ಬ್ಲಾಸ್ಟಿಂಗ್‌ನಿಂದಾಗಿ ಮನೆಗಳು ಬಿರುಕು ಬಿಡುತ್ತಿವೆ. ರಸ್ತೆಗಳೆಲ್ಲಾ ಧೂಳುಮಯವಾಗಿದ್ದು, ಹಿರಿಯರು ಮತ್ತು ಮಕ್ಕಳ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ಪರಿಸರ ಸಂಪತ್ತು ನಾಶವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಕಲ್ಲು ಗಣಿಗಾರಿಕೆಗೆ ನೀಡಿರುವ ಅವಧಿ ಮುಗಿದಿದ್ದು, ೨೦೨೬ರ ನಂತರ ಈ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಈ ಹಿಂದೆ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಅವಧಿ ಮುಗಿದ ನಂತರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಧಿಕಾರಿಗಳು ಗಣಿ ಮಾಲೀಕರ ಹಿತಾಸಕ್ತಿ ಕಾಯುವುದನ್ನು ಬಿಟ್ಟು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಗ್ರಾಮದಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು, ಒಂದು ವೇಳೆ ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಇಲಾಖೆಗಳು ಗಣಿಗಾರಿಕೆಗೆ ಮತ್ತೆ ಅನುಮತಿ ನೀಡಲು ಮುಂದಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜು ನಾಯ್ಕ, ಸೀತಾರಾಮ್ ಹೆಗಡೆ, ರಘುಪತಿ ನಾಯ್ಕ, ಮಂಜು ಶಿವನಾಯ್ಕ, ಮಂಜು ಬಿ. ನಾಯ್ಕ, ನಾಗರಾಜ್ ನಾಯ್ಕ, ಮಂಜಪ್ಪ ಬಡಿಗೇರ್, ಲಕ್ಷ್ಮಣ, ರಾಮಪ್ಪ, ಜಯಮ್ಮ, ಸಂಗೀತ, ಕೆರಿಯಮ್ಮ, ಬಿ. ಸಲೀಂ. ಅಜೀಮ್, ನೂರ್ ಅಹಮದ್, ರವಿ, ನಾರಾಯಣಪ್ಪ, ಉಮೇಶ, ಬಾಲು, ರಮೇಶ್, ದರ್ಶನ್, ಸೇರಿದಂತೆ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುದ್ದೆ ಭರ್ತಿಗೆ ಒತ್ತಾಯಿಸಿ ಮಾದಿಗ ಸಮಾಜದಿಂದ ಅಪರ ಡಿಸಿಗೆ ಮನವಿ
ಎಐ ಸೃಷ್ಟಿಸಿದ ಫೋಟೋ ನೋಡಿ ಜನರು ಕಂಗಾಲು; ಅರಣ್ಯ ಇಲಾಖೆ ಹೈರಾಣು..!