ಗ್ಯಾಸ್‌ ಟ್ರಬಲ್‌: ಬೀದಿಬದಿ ಹೋಟೆಲ್‌ ಭಾಗಶಃ ಬಂದ್

KannadaprabhaNewsNetwork |  
Published : Mar 15, 2026, 02:15 AM IST
ಬಳ್ಳಾರಿ ಸಿಟಿ ಬಸ್ ನಿಲ್ದಾಣದ ಎದುರಿನ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಸೌದೆ ಒಲೆಯನ್ನು ಬಳಕೆ ಮಾಡುತ್ತಿರುವುದು.  | Kannada Prabha

ಸಾರಾಂಶ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತಷ್ಟು ಹೆಚ್ಚಾಗಿದ್ದು, ಬೀದಿಬದಿಯ ಹೋಟೆಲ್‌ಗಳು ಭಾಗಶಃ ಬಂದ್ ಆಗಿವೆ.

ಬಳ್ಳಾರಿ: ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತಷ್ಟು ಹೆಚ್ಚಾಗಿದ್ದು, ಬೀದಿಬದಿಯ ಹೋಟೆಲ್‌ಗಳು ಭಾಗಶಃ ಬಂದ್ ಆಗಿವೆ. ದೊಡ್ಡ ಹೋಟೆಲ್ ಮಾತ್ರ ಒಂದಷ್ಟು ಉಸಿರಾಡುತ್ತಿದ್ದು, ಸದ್ಯದ ಸಿಲಿಂಡರ್ ಸಂಕಟದಿಂದ ಪಾರಾಗಲು ಕಟ್ಟಿಗೆ (ಸೌದೆ) ಒಲೆಗೆ ಮೊರೆ ಹೋಗಿದ್ದಾರೆ.

ಸಿಲಿಂಡರ್ ಅಭಾವದಿಂದ ಕಂಗಾಲಾಗಿರುವ ಹೋಟೆಲ್ ಉದ್ಯಮಿಗಳು ಮೆನುವಿನಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಇಡ್ಲಿ, ಪೂರಿ, ಉಪ್ಪಿಟ್ಟು, ಚಿತ್ರಾನ್ನ, ಪಲಾವ್ ಸೇರಿದಂತೆ ಕಡಿಮೆ ಗ್ಯಾಸ್‌ನಲ್ಲಿ ಸಿದ್ಧಪಡಿಸುವ ಆಹಾರಗಳಿಗೆ ಮಾತ್ರ ಪ್ರಮುಖ್ಯತೆ ನೀಡಲಾಗುತ್ತಿದೆ.

ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ಯಾಸ್ ಸಿಲಿಂಡರ್ ಸಿಗುವುದೆಂಬ ನಿರೀಕ್ಷೆ ವ್ಯಾಪಾರಿಗಳದ್ದು. ಆದರೆ, ಈಗಲೇ ಏನೂ ಹೇಳುವಂತಿಲ್ಲ ಎನ್ನುತ್ತಿರುವ ಗ್ಯಾಸ್ ಏಜೆನ್ಸಿಗಳು "ನೋ ಸ್ಟಾಕ್ " ಬೋರ್ಡ್ ತೂಗು ಹಾಕಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ನಗರದ ಸಣ್ಣಪುಟ್ಟ ಸುಮಾರು 150ಕ್ಕೂ ಹೆಚ್ಚು ಬೀದಿಬದಿಯ ಹೋಟೆಲ್ (ಬಂಡಿ ಹೋಟೆಲ್‌) ಬಂದ್‌ಗೆ ಆಗಿವೆ. ಇದರಿಂದ ನೂರಾರು ಕಾರ್ಮಿಕರ ನಿತ್ಯದ ಕೂಲಿಗೂ ಕುತ್ತು ಬಂದಿದೆ.

ಅಡುಗೆ ಅನಿಲದ ಅಭಾವ ಶುಭ ಕಾರ್ಯಗಳಿಗೂ ಕೊಕ್ಕೆ ಹಾಕುವಂತೆ ಮಾಡಿದೆ. ಯುಗಾದಿ ದಿನದಂದು ಗೃಹಪ್ರವೇಶ ಸೇರಿದಂತೆ ಅನೇಕ ಶುಭ ಸಮಾರಂಭಗಳಿಗೆ ಚಾಲನೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಅಡುಗೆ ಗುತ್ತಿಗೆದಾರರಿಗೆ ಮುಂಗಡ ಹಣ ನೀಡಲಾಗಿದೆ. ಗ್ಯಾಸ್ ಸಮಸ್ಯೆ ಹೀಗೆಯೇ ಮುಂದುವರಿದರೆ ಈ ಬಾರಿ ಯುಗಾದಿ ಹಬ್ಬ ಸಂತಸದ ಬದಲು ಸಂಕಟ ತಂದೊಡ್ಡುವ ಸಾಧ್ಯತೆಯಿದೆ ಎನ್ನುತ್ತಾರೆ ನಗರದ ಅಡುಗೆ ಗುತ್ತಿಗೆದಾರ ಮಹಾಂತಪ್ಪ.

ಕಳೆದ ನಾಲ್ಕೈದು ದಿನಗಳಿಂದ ಶುರುವಾಗಿರುವ ಸಿಲಿಂಡರ್ ಸಮಸ್ಯೆ ಮುಂದುವರಿಯುವ ಆತಂಕವಿದೆ. ಯುಗಾದಿಯಲ್ಲಿ ಹೆಚ್ಚಿನ ಶುಭಕಾರ್ಯಗಳು ನಡೆಯುತ್ತವೆ. ಹೊಸ ಅಂಗಡಿ ಆರಂಭ, ಗೃಹಪ್ರವೇಶ, ಪುರಾಣ ಪ್ರವಚನಗಳು ಸೇರಿದಂತೆ ಅನೇಕ ಸಮಾರಂಭಗಳಿಗೆ ಗುತ್ತಿಗೆದಾರರು ಅಡುಗೆ ಮಾಡಲು ಒಪ್ಪಿಕೊಂಡಿರುತ್ತಾರೆ. ಗ್ಯಾಸ್ ಸಿಲಿಂಡರ್ ಸಮಸ್ಯೆಯಾದರೆ ಅನಿವಾರ್ಯವಾಗಿ ನಾವು ಕೈಚೆಲ್ಲಬೇಕಾಗುತ್ತದೆ ಎನ್ನುವುದು ಅವರ ಆತಂಕ.

ವಾಣಿಜ್ಯ ಬಳಕೆಯ ಸಿಲಿಂಡರ್ ಹೋಟೆಲ್ ಉದ್ಯಮಕ್ಕೆ ಮಾತ್ರ ದೊಡ್ಡ ಪೆಟ್ಟು ನೀಡಿದ್ದು ಬಿಟ್ಟರೆ ಗೃಹಬಳಕೆಗೆ ಯಾವುದೇ ಸಮಸ್ಯೆಯಾಗಿಲ್ಲ. ಆಟೋಗಳಿಗೆ ಎಲ್‌ಪಿಜಿ ಸಿಲಿಂಡರ್‌ ಕೊರತೆಯೂ ಕಂಡು ಬಂದಿಲ್ಲ. ಡೀಲರ್‌ಗಳು ದೊಡ್ಡ ದೊಡ್ಡ ಹೋಟೆಲ್‌ಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಬೇಕಾಗುವಷ್ಟು ಸಿಲಿಂಡರ್ ಪೂರೈಕೆ ಮಾಡುತ್ತವೆ. ಆದರೆ, ಸಣ್ಣಪುಟ್ಟ ಹೋಟೆಲ್ ಮತ್ತಿತರ ವಾಣಿಜ್ಯ ಬಳಕೆಗೆ ಸಿಲಿಂಡರ್ ನೀಡುತ್ತಿಲ್ಲ ಎಂಬ ಆರೋಪಗಳು ದಟ್ಟವಾಗಿವೆ.

ಆತಂಕ ಬೇಡ:

ತಾಂತ್ರಿಕ ದೋಷದಿಂದಾಗಿ ಗ್ಯಾಸ್ ಬುಕಿಂಗ್ ತಕ್ಷಣಕ್ಕೆ ಸಾಧ್ಯವಾಗದಿದ್ದರೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಸರಬರಾಜಿನ ಲಭ್ಯತೆಗೆ ಅನುಗುಣವಾಗಿ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗಳನ್ನು ಒಮ್ಮೆ ಬುಕ್ ಮಾಡಿದ ನಂತರ ಮುಂದಿನ ಬುಕಿಂಗ್ ಮಾಡಲು ಕನಿಷ್ಠ 25 ದಿನಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಹಾಗೂ ಗ್ರಾಹಕ ಸಂಘ ಸಂಸ್ಥೆಗಳು ಅಡುಗೆ ಅನಿಲವನ್ನು ಮಿತವಾಗಿ ಬಳಸಬೇಕು. ಹೋಟೆಲ್ ಹಾಗೂ ಇನ್ನಿತರ ಕೈಗಾರಿಕೆಗಳಲ್ಲಿ ಜೈವಿಕ ಇಂಧನ, ಸೋಲಾರ್ ಅಥವಾ ವಿದ್ಯುತ್ ಶಕ್ತಿಯನ್ನು ಪರ್ಯಾಯವಾಗಿ ಬಳಸಲು ಉತ್ತೇಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತುರ್ತು ಸಂಖ್ಯೆ: 112, ಸಹಾಯವಾಣಿ: 1077, ದೂರವಾಣಿ ಸಂಖ್ಯೆ: 08392277100 ಗೆ ದೂರು ಸಲ್ಲಿಸಬಹುದಾಗಿದೆ. ಸಿಲಿಂಡರ್‌ಗಳ ಅಕ್ರಮ ಸಂಗ್ರಹಣೆ, ಕಾಳಸಂತೆಯಲ್ಲಿ ಮಾರಾಟ ಅಥವಾ ಸಾಗಾಣಿಕೆ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ನಾವು ಮೊದಲಿನಿಂದಲೂ ಅಡುಗೆಗೆ ಸೌದೆ ಒಲೆ ಬಳಸುತ್ತಿದ್ದೇವೆ. ರೊಟ್ಟಿ, ಚಪಾತಿ ಮಾತ್ರ ಸಿಲಿಂಡರ್‌ನಲ್ಲಿ ಮಾಡಲಾಗುತ್ತಿತ್ತು. ಸಿಲಿಂಡರ್ ಅಭಾವ ನಮಗೆ ಹೆಚ್ಚಿನ ಸಮಸ್ಯೆ ತಂದಿಲ್ಲ. ಸೌದೆ ಒಲೆ ಅಡುಗೆ ರುಚಿಯಾಗಿರುತ್ತದೆ ಎಂಬ ಕಾರಣಕ್ಕೆ ನಾವು ಮೊದಲಿನಿಂದಲೂ ಸೌದೆ ಬಳಕೆ ಮಾಡುತ್ತಿದ್ದೇವೆ ಎನ್ನುತ್ತಾರೆ ಹಳ್ಳಿಮನೆ ಹೋಟೆಲ್‌ ಪಾಲುದಾರ ದೊಡ್ಡಬಸಪ್ಪ ಶ್ರೀಧರಗಡ್ಡೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ಪಾಟೀಲಗೆ ವಿಜಯೇಂದ್ರ, ಜೋಶಿ ಸಮಾಧಾನ
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ