ಶಿವಮೊಗ್ಗ: ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ ಹಬ್ಬಕ್ಕೆ ಅಡಚಣೆಯುನ್ನುಂಟು ಮಾಡುವಂತಹ ಸಂಭವನೀಯ 80 ಜನ ಕಿಡಿಗೇಡಿ ವ್ಯಕ್ತಿಗಳನ್ನು ಗುರುತಿಸಿ ಪೊಲೀಸ್ ಇಲಾಖೆಯು ಈಗಾಗಲೇ ಅಂತಹವರನ್ನು ಗಡಿಪಾರು ಮಾಡಿ, ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಈ ಬಾರಿಯೂ ಹಿಂದೂ ಮಹಾಸಭಾ ಗಣಪತಿ ಉತ್ಸವ ಶಾಂತಿಯುತವಾಗಿ ಮತ್ತು ಅದ್ಧೂರಿಯಿಂದ ನಡೆಯಬೇಕು. ಇದಕ್ಕಾಗಿ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇಲಾಖೆಯ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದರು.
ಇನ್ನೂ ಕೆಲವು ಕಿಡಿಗೇಡಿಗಳನ್ನು ಗುರುತಿಸಿದ್ದು ಅವರ ಮೇಲೂ ಸಹ ಕ್ರಮ ಕೈಗೊಳ್ಳುತ್ತೇವೆ. ಯಾರೋ ಕೆಲವು ಜನ ಕಿಡಿಗೇಡಿ ಮಾಡುವ ಕೃತ್ಯದಿಂದ ಇಡೀ ಸಮಾಜಕ್ಕೆ ಹಾಗೂ ಹಬ್ಬದ ಆಚರಣೆಗೆ ಮತ್ತು ವೈಭವಕ್ಕೆ ತೊಂದರೆಯಾಗಲಿದೆ, ಆದ್ದರಿಂದ ಸಾರ್ವಜನಿಕರ ಹಿತ ರಕ್ಷಣೆಯ ದೃಷ್ಟಿಯಿಂದ ಗಡಿಪಾರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಹಿಂದಿನ ವರ್ಷ ಜಿಲ್ಲೆಯಲ್ಲಿ ಒಟ್ಟು ಮೂರುವರೆ ಸಾವಿರಕ್ಕೂ ಹೆಚ್ಚು ಗಣಪತಿಗಳ ಪ್ರತಿಷ್ಠಾಪನೆಯಾಗಿದ್ದು, ಈ ವರ್ಷವೂ ಮೂರು ಸಾವಿರದ ಆರು ನೂರು ಗಣಪತಿಗಳ ಪ್ರತಿಷ್ಠಾಪನೆಯಗುವ ನಿರೀಕ್ಷೆ ಇದೆ. ಗಣಪತಿ ಪ್ರತಿಷ್ಠಾಪನೆಯಿಂದ ಗಣಪ ವಿಸರ್ಜನೆಯಾಗುವ ವರೆಗೂ ಒಟ್ಟು ಒಂದುವರೆ ತಿಂಗಳುಗಳ ಕಾಲ ಪೊಲೀಸ್ ಇಲಾಖೆಯು ಸಾರ್ವಜನಿಕರ ಹಿತ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾರ್ವಜನಿಕರಿಗಾಗಿ ನಾವು ಯಾವುದೇ ಹಿಂಜರಿಕೆ ಇಲ್ಲದೇ ಕರ್ತವ್ಯ ನಿರ್ವಹಿಸಲು ಸದಾ ಕಾಲ ಸಜ್ಜಾಗಿರುತ್ತೇವೆ ಎಂದು ತಿಳಿಸಿದರು.
ಹಬ್ಬದಲ್ಲಿ ಜನರ ರಕ್ಷಣೆಗಾಗಿಯೆ ಒಟ್ಟು 2500ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತೇವೆ. ಇದರೊಂದಿಗೆ 2500 ಯಿಂದ 3000 ದಷ್ಟು ಜನ ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾಗಲಿದ್ದಾರೆ. ನಗರದಲ್ಲಿ 1000ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.ಹಳೆಯ ವರ್ಷದ ಗಣಪತಿ ವಿಸರ್ಜನೆಯ ವಿಡಿಯೋಗಳನ್ನು ಗಮನಿಸಿ, ಜನ ಸಮೂಹದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವುದು, ಹೆಣ್ಣು ಮಕ್ಕಳಿಗೆ ಕಿರಿ ಕಿರಿ ಮಾಡುವುದು, ಅವರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಿಡಿಗೇಡಿತನ ಮಾಡುವುದು, ಪ್ರಚೋದನಾಕಾರಿಯಾಗಿ ಘೋಷಣೆ ಕೂಗುವುದು, ತಳ್ಳಾಟ ಮಾಡುವುದು ಈ ರೀತಿಯ ಕೃತ್ಯ ಮಾಡುವವರನ್ನು ಗುರುತಿಸಿ, ಅವರುಗಳ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದೇ ಏಕ ಉದ್ದೇಶ ಆಗಿರುತ್ತದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ , ಎಸ್.ರಮೇಶ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ಕೋಟೆ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಪಾಟೀಲ್ ಮತ್ತು ಹಿಂದೂ ಮಹಾ ಸಭಾ ಗಣಪತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.