ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗೌರಿ ಮತ್ತು ಗಣೇಶನ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆಸಿದ ಜನರು ಮುಂಜಾನೆಯೇ ಮನೆ ಮನೆಗಳಲ್ಲಿ ಗೌರಿ ಪೂಜೆ ನೆರವೇರಿಸಿದರು. ಮಹಿಳೆಯರು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.
ಪಟ್ಟಣದ ಈಶ್ವರ ದೇವಾಲಯ, ಬಸವನ ಗುಡಿ ಕಲ್ಲುಮಠ ಸೇರಿದಂತೆ ವಿವಿಧೆಡೆ ಗೌರಿ ಪೂಜೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸರತಿಯ ಸಾಲಿನಲ್ಲಿ ನಿಂತ ಭಕ್ತರು ಗೌರಿಗೆ ಬಾಗಿನ ಅರ್ಪಿಸಿ ಸಂಭ್ರಮಿಸಿದರು. ಸೀರೆ, ಕುಪ್ಪಸ, ಬೆಲ್ಲ, ಕೊಬ್ಬರಿ ಮುಂತಾದವುಗಳನ್ನು ಮೊರದಲ್ಲಿ ತುಂಬಿ ಹೆಣ್ಣು ಮಕ್ಕಳಿಗೆ ತವರಿನ ಬಾಗಿನ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿ ಹಳ್ಳಿಯಲ್ಲೂ ಗಣೆಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲುತ್ತಿದೆ. ತಾಲೂಕಿನೆಲ್ಲೆಡೆ 850ಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಯಾಗಿದೆ. ತಾಲೂಕಿನ ಹೊನ್ನೇನಹಳ್ಳಿ ಆಲದ ಮರದ ಗೇಟ್ ಬಳಿ ಹಿಂದೂ-ಮುಸ್ಲಿಮರು ಒಗ್ಗೂಡಿ ಗೌರಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಾಜ್ಯಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಮುಸ್ಲಿಂ ಕುಟುಂಬದ ಮಹಿಳೆಯರು ಗಣಪತಿಗೆ ವಂದಿಸಿ ಮಂಗಳಾರತಿ ಸ್ವೀಕರಿಸಿ ಧನ್ಯತಾಬಾವ ಪ್ರದರ್ಶಿಸಿದರು.
ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣ, ಗ್ರಾಮೀಣ ಹಾಗೂ ಕಿಕ್ಕೇರಿ ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ. ತಹಸೀಲ್ದಾರ್ ಶ್ರೇಯಸ್ ಅವರ ಸೂಚನೆ ಮೇರೆಗೆ ಗ್ರಾಮೀಣ ಪ್ರದೇಶದಲ್ಲಿ ಸಂಚಾರಿ ಪೊಲೀಸರ ಪಡೆ ರಚಿಸಿದ್ದು ಪೊಲೀಸರು ಪ್ರತಿ ಗ್ರಾಮಕ್ಕೂ ತೆರಳಿ ಸ್ಥಳಪರಿಶೀಲನೆ ಮಾಡಿ ಗಣಪತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿ ನೀಡಿದ್ದಾರೆ.