ಕನ್ನಡಪ್ರಭ ವಾರ್ತೆ ಪಾಂಡವಪುರ
ಗಣೇಶ ಹಬ್ಬದ ಅಂಗವಾಗಿ ಕೆ.ಬೆಟ್ಟಹಳ್ಳಿ ಶ್ರೀಲಕ್ಷ್ಮೀದೇವಿ ದೇವಸ್ಥಾನದಲ್ಲಿ ಗ್ರಾಮದ ಯುವಕರು ಗಣಪತಿ ಪ್ರತಿಷ್ಠಾಪನೆ ಮಾಡಿ ಬಳಿಕ ಸೋಮವಾರ ಸಂಜೆ ಡಿಜೆ ಸೌಂಡ್ ಹಾಕಿಕೊಂಡು ಗಣಪತಿ ವಿಸರ್ಜನೆ ಮಾಡಲು ಮುಂದಾಗಿದ್ದಾರೆ.
ವಿಸರ್ಜನೆ ವೇಳೆ ಡಿಜೆ ಸೌಂಡ್ ಹಾಕಿಕೊಂಡು ಹೋಗುತ್ತಿದ್ದ ಹಿನ್ನೆಲೆಯಲ್ಲಿ ಕ್ಯಾತನಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಲಿಂಗರಾಜು ಅವರು ಅನುಮತಿ ಪಡೆಯದೇ ಡಿಜೆ ಸೌಂಡ್ ಹಾಕಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದಾರೆ.ಈ ವೇಳೆ ಪೊಲೀಸರು ಹಾಗೂ ಗ್ರಾಮದ ಯುವಕರು ನಡುವೆ ಗಲಾಟೆ ನಡೆದಿದೆ. ರೊಚ್ಚಿಗೆದ್ದ ಯುವಕರು ಗಣೇಶಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ನ್ನು ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿಯೇ ಅಡ್ಡ ನಿಲ್ಲಿಸಿ ಗಣೇಶನ ಮೂರ್ತಿಗಳನ್ನು ರಸ್ತೆ ಮಧ್ಯೆಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.
ಘಟನೆಯಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಉಂಟಾಯಿತು. ಬಳಿಕ ಗ್ರಾಮಸ್ಥರು-ಪೊಲೀಸರು ಮಾತುಕತೆ ನಡೆಸಿ ಗಣೇಶಮೂರ್ತಿ ವಿಸರ್ಜನೆ ಮಾಡಲು ಅವಕಾಶಕೊಟ್ಟರು. ಇನ್ಮುಂದೆ ಅನುಮತಿ ಪಡೆಯದೆ ಡಿಜೆ ಬಳಸಿ ಗಣೇಶ ವಿಸರ್ಜನೆ ಮಾಡಲು ಮುಂದಾದರೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.