ಕನ್ನಡಪ್ರಭ ವಾರ್ತೆ ಮಂಡ್ಯ
ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಪೇಟೆಬೀದಿ, ಮಾರುಕಟ್ಟೆ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ ಜನ ಜಂಗುಳಿಯಿಂದ ತುಂಬಿಹೋಗಿತ್ತು. ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿತ್ತು. ವರ್ತಕರು-ವ್ಯಾಪಾರಸ್ಥರೆಲ್ಲರೂ ಮಾರಾಟದಲ್ಲಿ ಬ್ಯುಸಿಯಾಗಿದ್ದರು.
ಮನೆಯಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪೂಜಾ ಸಾಮಗ್ರಿಗಳು, ಚೆಂದದ ಪುಟ್ಟ ಗೌರಿ-ಗಣೇಶ ವಿಗ್ರಹಗಳ ಆಯ್ಕೆಯಲ್ಲಿ ತಲ್ಲೀನರಾಗಿದ್ದರು. ಇಷ್ಟವಾದ ಮೂರ್ತಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದರು.ಸ್ವರ್ಣಗೌರಿ ಪ್ರತಿಷ್ಠಾಪನೆಗೆ ಉತ್ಸಾಹ:
ಗಣಪತಿಯನ್ನು ಪ್ರತಿಷ್ಠಾಪಿಸುವುದಕ್ಕೆ ಮೊದಲಿನಷ್ಟು ಉತ್ಸಾಹ ಯುವಕರಲ್ಲಿ ಈಗ ಇಲ್ಲವಾದರೂ ಕೆಲವು ಯುವಕರು ದೊಡ್ಡ ಗಣೇಶನನ್ನು ಖರೀದಿಸಿ ಪ್ರತಿಷ್ಠಾಪಿಸುವುದಕ್ಕೆ ಉತ್ಸುಕರಾಗಿದ್ದರು. ಅಂಗಡಿಗಳಲ್ಲಿ ಗಣೇಶನ ತರಹೇವಾರಿ ಬಣ್ಣ, ಆಕಾರದ ವಿಗ್ರಹಗಳು ಗಮನಸೆಳೆಯುತ್ತಿದ್ದವು. ಯುವಕರು ಚೌಕಾಸಿ ವ್ಯಾಪಾರ ಮಾಡಿ ಮೂರ್ತಿಗಳನ್ನು ಖರೀದಿಸುವ ದೃಶ್ಯಗಳು ಕಂಡುಬಂದವು. ಪುಟ್ಟ ಮಕ್ಕಳಿಗೆ ಪುಟಾಣಿ ಗೌರಿ-ಗಣೇಶನನ್ನು ಕೂರಿಸುವ ಕ್ರೇಜ್. ತಂದೆ-ತಾಯಿ ಬಳಿ ಹಠ ಮಾಡಿ ಪುಟ್ಟ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಲು ಅಣಿಯಾಗುತ್ತಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಧರಿಸುವ ಸಂತಸ ಒಂದೆಡೆಯಾದರೆ, ಗೌರಿ-ಗಣೇಶನನ್ನು ಕೂರಿಸಿ ಪೂಜಿಸುವುದರೊಂದಿಗೆ ಗಣೇಶನನ್ನು ವಿಸರ್ಜಿಸಿ ಆನಂದಿಸುವ ಸಂಭ್ರಮ ಮತ್ತೊಂದೆಡೆಯಾಗಿತ್ತು.
ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಬೆಎಲೆ ಏರಿಕೆ ಬಿಸಿ ಸಾಮಾನ್ಯಜನರನ್ನು ತಟ್ಟಿದಂತೆ ಕಂಡುಬರುತ್ತಿಲ್ಲ. ಸಾಮಾನ್ಯ ದಿನಗಳಲ್ಲಿದ್ದಷ್ಟೇ ಬೆಲೆ ಹೂವು, ಹಣ್ಣು, ತರಕಾರಿಗಳಲ್ಲೂ ಕಂಡುಬರುತ್ತಿತ್ತು. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಬೆಲೆ ಕಡಿಮೆಯಾಗಿತ್ತು. ಹಣ್ಣುಗಳ ಪೈಕಿ ಪ್ರತಿ ಕೆಜಿ ಮಿಕ್ಸ್-೧೫೦ ರು.. ಕಿತ್ತಳೆ-೧೨೦ ರು.,ಸೇಬು-೧೫೦ ರು., ಮೂಸಂಬಿ-೮೦ ರು., ದಾಳಿಂಬೆ-೨೦೦ ರು., ದ್ರಾಕ್ಷಿ-೨೦೦ ರು., ಮರಸೇಬು-೨೦೦ ರು., ಬಾಳೆಹಣ್ಣು-೮೦ ರು., ಸೀಬೆ-೧೦೦ ರು., ಸೀತಾಫಲ-೧೨೦ ರು., ಪೈನಾಪಲ್ ಒಂದಕ್ಕೆ ೫೦ ರು.ನಂತೆ ಮಾರಾಟವಾಗುತ್ತಿತ್ತು.
ಹೂವಿನ ಬೆಲೆಯೂ ಸಾಮಾನ್ಯವಾಗಿತ್ತು. ಪ್ರತಿ ಮಾರು ಸೇವಂತಿಗೆ ೮೦ ರು., ಕಾಕಡಾ-೮೦ ರು., ಮಲ್ಲಿಗೆ-೨೦೦ ರು., ಮರಳೆ-೧೦೦ ರು., ಕನಕಾಂಬರ-೧೩೦ ರು.ಗಳಂತೆ ಮಾರಾಟವಾಗುತ್ತಿದ್ದವು.