ಸಂಭ್ರಮದಿಂದ ಜರುಗಿದ ಗೌರಿಶಂಕರ ಜಾತ್ರೆ

KannadaprabhaNewsNetwork |  
Published : Dec 28, 2023, 01:45 AM IST
೨೭ಬಿಎಸ್ವಿ೦೧- ಬಸವನಬಾಗೇವಾಡಿಯ ಗೌರಿಶಂಕರ ಜಾತ್ರೆಯಂಗವಾಗಿ ಬುಧವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ಗೌರಿ, ಶಿವ, ಗಂಗೆ, ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ಗೌರಿಶಂಕರ ಜಾತ್ರೆ ಅದ್ಧೂರಿಯಾಗಿ ಜರುಗಿತು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಗೌರಿಶಂಕರ ದೇವಸ್ಥಾನದ ಜಾತ್ರೆಯಂಗವಾಗಿ ಬುಧವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಭ್ರಮದಿಂದ ಜರುಗಿತು. ಜಾತ್ರೆಯಂಗವಾಗಿ ಗೌರಿಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಸಲಾಗಿರುವ ಗೌರಿ, ಶಿವ, ಗಂಗೆ, ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಅಲಂಕೃತಗೊಂಡಿದ್ದ ಗರ್ಭಗುಡಿಯ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿದರು. ಕೆಲವರು ಗೌರಿಗೆ ಉಡಿ ತುಂಬಿದರು.

ಮಧ್ಯಾಹ್ನ ಪಟ್ಟಣದ ಮಾರುತಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಜೆ ಗೌರಿಶಂಕರ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮೇಳ, ಹಲಗೆ ನಾದ ಸೇರಿದಂತೆ ವಿವಿಧ ವಾದ್ಯಗಳ ತಾಳಕ್ಕೆ ಜನರು ಹೆಜ್ಜೆ ಹಾಕಿ ಸಂಭ್ರಮ ಪಟ್ಟರು. ದ್ಯಾಮವ್ವ ಸೋಗು ಸಾಗುವ ಮಾರ್ಗ ಎರಡು ಬದಿಗಳಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ನಿಂತು ಮೆರವಣಿಗೆಯನ್ನು ವೀಕ್ಷಿಸಿದರು.

ಈ ಸಲ ಹಣಮಂತ ಕಾಮನಕೇರಿ ದ್ಯಾಮವ್ವನ ಸೋಗು ಹಾಕಿದ್ದರು. ಇವರಿಗೆ ಅಪ್ಪಾಶಿ ಮಟ್ಯಾಳ ಸಾಥ್ ನೀಡಿದರು. ದ್ಯಾಮವ್ವನ ಸೇವಕಿಯರಾಗಿ ಕಿರಣ ಕಾಮನಕೇರಿ, ಸಮರ್ಥ ಯರನಾಳ ಜಾಡರ ಸೋಗು ಹಾಕಿದ್ದರೆ, ಮಲ್ಲು ಹಡಪದ ಅವರು ಪೂಜಾರಿ ಸೋಗು ಹಾಕಿದ್ದರು.ಹಣಮಂತ ವಾಲೀಕಾರ ಪೋತರಾಜ್ ಹಾಕಿದ್ದರು.

ದ್ಯಾಮವ್ವನ ಸೋಗಿನ ಮೆರವಣಿಗೆ ಗೌರಿಶಂಕರ ದೇವಸ್ಥಾನಕ್ಕೆ ತಲುಪಿದ ನಂತರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಶಿವ, ಗಂಗೆ, ನಂದಿ ದೇವರುಗಳನ್ನು ಮೆರವಣಿಗೆಯೊಂದಿಗೆ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಬಾವಿಯಲ್ಲಿ ಸಂಜೆ ವಿಸರ್ಜಿಸಲಾಯಿತು. ಮೆರವಣಿಗೆ ಸಾಗುವ ರಸ್ತೆಯ ಎರಡು ಬದಿಯಲ್ಲಿ ಜಮಾಯಿಸಿದ್ದ ಭಕ್ತ ಸಮೂಹ ಉತ್ತತ್ತಿ, ಚುನಮರಿ, ಬಾರಿಕಾಯಿ ತೂರಿ ದೇವರಿಗೆ ನಮಸ್ಕರಿಸಿ ಧನ್ಯತಾ ಭಾವ ಅನುಭವಿಸಿದರು.

ದ್ಯಾಮವ್ವನ ಸೋಗಿನ ಮೆರವಣಿಗೆಯಲ್ಲಿ ಸಂಗಪ್ಪ ವಾಡೇದ, ಮಹಾಂತೇಶ ಹಂಜಗಿ, ಬಸವಂತ ಅಡಗಿಮನಿ, ಈರಪ್ಪ ಗಬ್ಬೂರ, ಮಲಕಾಜಿ ಕುಳಗೇರಿ, ಈರಪ್ಪ ಅಡಗಿಮನಿ, ಮಾಂತಪ್ಪ ಕುಳಗೇರಿ, ಗುಂಡಪ್ಪ ಶೀಕಳವಾಡಿ, ಶಿವಪ್ಪ ಹಡಪದ, ಸಂತೋಷ ಯರನಾಳ, ಶ್ರೀಶೈಲ ಹಿರೇಮಠ, ಪಾವಡೆಪ್ಪ ಕರಮಾಳಕರ, ಶರಣು ನಾಡಗೌಡ, ಪಾವೆಡಪ್ಪ ಕೊಂಡಗುಳಿ, ಶಿವಪ್ಪ ಹೂಗಾರ, ನಾಗಪ್ಪ ಬಾಡಗಿ, ಮಲ್ಲಯ್ಯ ನರಸಲಗಿಮಠ ಸೇರಿದಂತೆ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ