ಅನಾಥ ವಾಹನಗಳ ತೆರವು ಆರಂಭಿಸಿದ ಜಿಬಿಎ

KannadaprabhaNewsNetwork |  
Published : Jul 11, 2026, 03:45 AM IST
ಅನಾಥ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿದ ಸಚಿವ ಕೃಷ್ಣ ಬೈರೇಗೌಡ. ಈ ವೇಳೆ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಪಾದಚಾರಿ ಮಾರ್ಗಗಳ ಒತ್ತುವರಿ ತೆರುವ ಕಾರ್ಯಾಚರಣೆ ಜೊತೆಗೆ ಶುಕ್ರವಾರದಿಂದ ನಗರದ ರಸ್ತೆಗಳು, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾದಚಾರಿ ಮಾರ್ಗಗಳ ಒತ್ತುವರಿ ತೆರುವ ಕಾರ್ಯಾಚರಣೆ ಜೊತೆಗೆ ಶುಕ್ರವಾರದಿಂದ ನಗರದ ರಸ್ತೆಗಳು, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಕ್ವಿನ್ಸ್ ರಸ್ತೆಯಲ್ಲಿ ಅನಾಥ ವಾಹನಗಳಿಗೆ ನೊಟೀಸ್ ಅಂಟಿಸುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕಾರ್ಯಾಚರಣೆಗೆ ಚಾಲನೆ ನೀಡಿದರು. ಸಂಚಾರ ಪೊಲೀಸರು ನಗರದ ವಿವಿಧೆಡೆ 1,581 ಅನಾಥ ವಾಹನಗಳನ್ನು ಗುರುತಿಸಿದ್ದಾರೆ. ಈ ಪೈಕಿ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 23ವಾಹನಗಳಿಗೆ ನೋಟಿಸ್‌ ಚೀಟಿ ಅಂಟಿಸಲಾಗಿದೆ. ಸಂಬಂಧಪಟ್ಟ ವಾಹನಗಳ ಮಾಲೀಕರು ಒಂದು ವಾರದೊಳಗೆ ದಂಡ ಕಟ್ಟಿ ತೆಗೆದುಕೊಂಡು ತಮ್ಮ ಸ್ವಂತ ಸ್ಥಳದಲ್ಲಿ ನಿಲ್ಲಿಸಬಹುದು. ಒಂದು ವೇಳೆ ವಾಹನವನ್ನು ಅಲ್ಲಿಂದ ಮತ್ತೊಂದು ಸಾರ್ವಜನಿಕ ಸ್ಥಳಕ್ಕೆ ಸ್ಥಳಾಂತರಿಸಿದರೆ ಭಾರಿ ದಂಡವನ್ನು ವಿಧಿಸಲಾಗುತ್ತದೆ.

1 ವಾರದೊಳಗೆ ವಾಹನ ಸ್ಥಳಾಂತರಿಸದಿದ್ದರೆ, ಸಂಚಾರ ಪೊಲೀಸರ ಸಹಯೋಗದಲ್ಲಿ ಆಯಾ ಪಾಲಿಕೆಯಿಂದ ಟೋಯಿಂಗ್ ಮಾಡಿಕೊಂಡು ಬೇರೆಡೆ ಸ್ಥಳಾಂತರಿಸಲಾಗುತ್ತದೆ. 15 ದಿನದೊಳಗಾಗಿ ವಾಹನಗಳ ಮಾಲೀಕರು ಟೋಯಿಂಗ್ ಶುಲ್ಕ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ತಮ್ಮ ಸ್ವಂತ ಜಾಗಕ್ಕೆ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ.ಅತಿಕ್ರಮಕ್ಕೆ ಅವಕಾಶವಿಲ್ಲ:

ಅನಾಥ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ವಾಹನಗಳನ್ನು ತೆರವುಗೊಳಿಸುವಂತೆ 15 ದಿನಗಳ ಹಿಂದೆಯೇ ಮನವಿ ಮಾಡಿದ್ದರೂ ಜನ ತೆರವು ಮಾಡಿಲ್ಲ. ಇಂತಹ ವಾಹನಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಸಾರ್ವಜನಿಕ ಸ್ಥಳಗಳ ಅತಿಕ್ರಮಣ ಆಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ನಗರ ನೋಡಲು ಕೂಡ ಅಸಹ್ಯವಾಗಿ ಕಾಣಿಸುತ್ತದೆ ಎಂದು ಹೇಳಿದರು.

ಮನೆ ಮುಂದಿನ ವಾಹನಗಳಿಗೆ ಸಮಸ್ಯೆ ಇಲ್ಲ

ಮನೆ ಬಳಿ ನಿಲ್ಲಿಸುವ ವಾಹನಗಳಿಗೆ ಸಮಸ್ಯೆಯಿಲ್ಲ. ಮನೆಗಳ ಬಳಿ ನಿಲ್ಲಿಸಿರುವ ವಾಹನಗಳನ್ನು ಏಕಾಏಕಿ ತೆರವುಗೊಳಿಸುವಂತೆ ಹೇಳಲು ಆಗುವುದಿಲ್ಲ. ವಾಸ್ತವದಲ್ಲಿ ಅದು ಕಾರ್ಯಸಾಧುವಲ್ಲ. ಆದರೆ, ಮುಂದಿನ ದಿನಗಳಲ್ಲಿ ಮನೆಗಳಲ್ಲಿ ಕಡ್ಡಾಯ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ಕುರಿತು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮತ್ತು ಅದನ್ನು ಅನುಷ್ಠಾನ ಮಾಡಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರದ ವಿವಿಧೆಡೆ ಅನೇಕ ದಿನಗಳಿಂದ ನಿಲ್ಲಿಸಿರುವ ಅನಾಥ ವಾಹನಗಳ ಬಗ್ಗೆ ನಾಗರಿಕರು ಕೂಡ ಸಂಚಾರ ಪೊಲೀಸ್ ಇಲಾಖೆ ‘ಅಸ್ತ್ರಂ’ ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳಬಹುದು.-ಕೃಷ್ಣ ಬೈರೇಗೌಡ, ಸಚಿವ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

69 ವರ್ಷಗಳ ನಂತರ ಬೆಂಗಳೂರು ಪೊಲೀಸ್ ಇಲಾಖೆ ಮೂರು ಹೋಳು
10ನೇ ದಿನ 26 ಕಿ.ಮೀ ಫುಟ್ಪಾತ್‌ ಒತ್ತುವರಿ ತೆರವು