ಸಾಗರ: ಮಲೆನಾಡಿನ ಅರಣ್ಯಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗೀತಾ ಅವರನ್ನು ಗೆಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಗೀತಾ ಶಿವರಾಜಕುಮಾರ್ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೀತಾ ಅವರ ಪರವಾದ ಅಲೆಯಿದೆ. ಮುಂದಿನ ದಿನಗಳಲ್ಲಿ ಗೀತಾ ಮತ್ತು ಶಿವರಾಜಕುಮಾರ್ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮತಯಾಚನೆ ನಡೆಸಲಿದ್ದಾರೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆ ಮನೆಮನೆಯಲ್ಲಿ ಮಾತನಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಡವರ ಕಲ್ಯಾಣಕ್ಕಾಗಿ ಇರುವ ಉದ್ಯೋಗ ಖಾತ್ರಿ ಯಶಸ್ವಿಯಾಗಿಲ್ಲ, ಆಶ್ರಯ, ಅಕ್ರಮ-ಸಕ್ರಮ ಯಾವುದೂ ಜನರಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಚುನಾವಣೆ ಹತ್ತಿರ ಬಂದಾಗ ಮಾಜಿ ಶಾಸಕ ಹಾಲಪ್ಪ ಈಡಿಗರ ಸಮಾವೇಶ ಮಾಡಿ ಕಾಗೋಡು ತಿಮ್ಮಪ್ಪನವರನ್ನು ಬಿಟ್ಟು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸನ್ಮಾನಿಸಿದ್ದಾರೆ. ಅಭಿವೃದ್ಧಿ ಯೋಜನೆಗೆ ಅನುದಾನ ತಂದಿದ್ದೇನೆಂದು ಸುಳ್ಳು ಪ್ರಚಾರ ಪಡೆಯುತ್ತಿರುವ ಹಿಂದಿನ ಶಾಸಕರು ಹಾಗೂ ಬಿಜೆಪಿ ಪಕ್ಷದ ವಿರುದ್ಧ ಸೂಕ್ತ ದಾಖಲೆ ಹಾಜರು ಪಡಿಸಿ ತನಿಖೆ ನಡೆಸುತ್ತೇನೆ ಎಂದು ಹೇಳಿದರು.ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅಭಿವೃದ್ಧಿ ಮಾಡಿದ್ದಾಗಿ ಹೇಳುತ್ತಾರೆ. ಅಭಿವೃದ್ದಿ ಮಾಡಿದ್ದು, ಅವರ ಆಸ್ತಿ ಇರುವ ಕಡೆ ಮಾತ್ರ. ಇದರಿಂದ ಅವರ ಆಸ್ತಿಯ ಬೆಲೆ ಹೆಚ್ಚಾಗಿದೆ. ಯಡಿಯೂರಪ್ಪ ಧೃತರಾಷ್ಟ್ರನಂತೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪರದಾಡುತ್ತಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳ ಮತಗಳನ್ನು ವಿಭಜನೆ ಮಾಡಲು ಈಶ್ವರಪ್ಪ ಅವರನ್ನು ಪಕ್ಷೇತರವಾಗಿ ಕಣಕ್ಕೆ ಇಳಿಸಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಆಸ್ತಿ ಮಾಡಿದ್ದೆ ಅವರ ಸಾಧನೆಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಆಸೆ ಇದ್ದು, ಮತದಾರರು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಚಿತ್ರನಟ ಶಿವರಾಜ ಕುಮಾರ್, ಆರ್.ಎಂ.ಮಂಜುನಾಥ ಗೌಡ, ಕಲಸೆ ಚಂದ್ರಪ್ಪ, ಇಂದೂಧರ ಗೌಡ, ಬಿ.ಆರ್.ಜಯಂತ್, ಅನಿತಾ ಕುಮಾರಿ, ಚಂದ್ರಪ್ಪ.ಎಲ್, ಅಶೋಕ ಬೇಳೂರು, ಕೆ.ಹೊಳೆಯಪ್ಪ, ರವಿಕುಮಾರ್, ತಸ್ರೀಫ್, ಮಕ್ಬೂಲ್ ಅಹ್ಮದ್, ಸುಮಂಗಲ ರಾಮಕೃಷ್ಣ ಇನ್ನಿತರರು ಹಾಜರಿದ್ದರು.