ಶಿಡ್ಲಘಟ್ಟ: ಹಿರಿಯರಿಗೆ ಗೌರವ ನೀಡುವುದು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಾಗರಿಕ ಜೀವನದ ಪ್ರಮುಖ ಮೌಲ್ಯಗಳಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ವೈಯಕ್ತಿಕ ಹಿತಕ್ಕಿಂತ ರಾಷ್ಟ್ರದ ಹಿತಕ್ಕೆ ಆದ್ಯತೆ ನೀಡುವುದು ಮುಖ್ಯ. ಪ್ರತಿಯೊಬ್ಬ ನಾಗರಿಕನಿಗೂ ಸಾಮಾನ್ಯ ಕಾನೂನು ತಿಳಿವಳಿಕೆ ಅತ್ಯಗತ್ಯ. ಕಾನೂನು ಗೊತ್ತಿಲ್ಲ ಎಂಬ ನೆಪದಲ್ಲಿ ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕಾನೂನಿಗೆ ತಲೆಬಾಗಿ ನಡೆಯುವುದು ಸತ್ಪ್ರಜೆಯ ಮೊದಲ ಲಕ್ಷಣ ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, ಸಂಚಾರ ನಿಯಮಗಳು ಮತ್ತು ಚಾಲನಾ ಪರವಾನಗಿ ಹೊಂದುವ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿ, ಆರ್.ಟಿ.ಒ ಅಧಿಕಾರಿಗಳನ್ನು ಕಾಲೇಜಿಗೆ ಕರೆದುಕೊಂಡು ಬರುತ್ತೇನೆ, ಎಲ್ಲರೂ ಆನ್ ಲೈನ್ ಮೂಲಕ ಅರ್ಜಿ ತುಂಬಿ ಪರವಾನಗಿ ಪಡೆದುಕೊಳ್ಳಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ, ಎ.ಪಿ.ಪಿ ಮೊಹಮ್ಮದ್ ಖಾಜಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಶಾಮಿಗೌಡ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ , ಡಾಲ್ಫಿನ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಜೆ. ಸುದರ್ಶನ್ ಹಾಜರಿದ್ದರು.-----
ಶಿಡ್ಲಘಟದ ಡಾಲ್ಫಿನ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಮಾತನಾಡಿದರು.