ಗುರುಗಳ ಬಳಿ ಪಾರಮಾರ್ಥಿಕ ಜ್ಞಾನ ಪಡೆಯಿರಿ: ಶರಣಾಂಬಿಕೆ ತಾಯಿ

KannadaprabhaNewsNetwork | Published : Jul 22, 2024 1:20 AM

ಸಾರಾಂಶ

ಶರಣರಿಗೆ ಬಾಹ್ಯ ಆಡಂಬರ ಬೇಕಿಲ್ಲ, ಆಂತರಂಗದ ಆಸಕ್ತಿ ಅಗತ್ಯವಿದೆ ಎಂದು ಶಿಕಾರಿಪುರದ ಬಸವಾಶ್ರಮದ ಶರಣಾಂಬಿಕೆ ಮಲೇಬೆನ್ನೂರು ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ವೈ.ನಾರೇಶಪ್ಪ ಮನೆಯಲ್ಲಿ ಗುರುಪೂರ್ಣಿಮೆ; ಮನೆಯಲ್ಲಿ ಮಹಾಮನೆ ಗೋಷ್ಠಿ- - - ಮಲೇಬೆನ್ನೂರು: ಶರಣರಿಗೆ ಬಾಹ್ಯ ಆಡಂಬರ ಬೇಕಿಲ್ಲ, ಆಂತರಂಗದ ಆಸಕ್ತಿ ಅಗತ್ಯವಿದೆ ಎಂದು ಶಿಕಾರಿಪುರದ ಬಸವಾಶ್ರಮದ ಶರಣಾಂಬಿಕೆ ಅಭಿಪ್ರಾಯಪಟ್ಟರು.ಪಟ್ಟಣದ ವೈ.ನಾರೇಶಪ್ಪನವರ ಮನೆಯಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡ ಮನೆಯಲ್ಲಿ ಮಹಾಮನೆ ಗೋಷ್ಠಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಿಮ್ಮೊಳಗೆ ಆತ್ಮಚೈತನ್ಯ ಇದೆ. ಮನಃಶಾಂತಿಗೆ ಆಸೆಗಳು ಕಡಿಮೆ ಆಗಬೇಕು. ಶರಣರ ಆತ್ಮೋದ್ಧಾರಕ್ಕೆ ವಚನ, ಲಿಂಗ, ಅಗತ್ಯವಿದೆ. ಆಗ ಏಕಾಗ್ರತೆ ಜಾಗೃತವಾಗುತ್ತದೆ ಎಂದರು.

ಶರಣರಾಗಲು ದೇವಾಲಯ ಎಂಬ ಮರದ ಕೊಂಬೆ ಸುತ್ತದೇ ಮನಃದಲ್ಲಿನ ಲಿಂಗವನ್ನು ಅಪ್ಪಿಕೊಳ್ಳಿ. ಹಣ, ಸಮಯ ಪಾಲನೆ, ಸಾಮಾಜಿಕ ಪ್ರಜ್ಞೆ ಸದಾ ಜತೆಗಿಟ್ಟು ಜೀವನ ನಡೆಸಿದರೆ ಜೀವನ ಶರಣರಂತೆ ಸಾಗುತ್ತದೆ. ಹಣ ಗಳಿಸಿದರೆ ಭೂತಿ ಆಗುತ್ತೀರಿ, ವಿಭೂತಿ ಧರಿಸಿದರೆ ಶರಣರಾಗುವಿರಿ. ಯುವಕ, ಯುವತಿಯರು ದೈವಿಕ ಭಾವನೆ ಅಳವಡಿಸಿಕೊಳ್ಳಲು ಗುರುಗಳ ಬಳಿ ತೆರಳಿ ಪಾರಮಾರ್ಥಿಕ ಜ್ಞಾನ ಪಡೆಯಬೇಕು. ಆದರೆ ಸುಲಭವಾಗಿ ಆ ಜ್ಞಾನ ಲಭ್ಯವಾಗಲ್ಲ. ಶಿವ ಇದ್ದಲ್ಲಿ ಬದುಕು ಸುಂದರವಾಗುತ್ತದೆ. ಇಲ್ಲದಿದ್ದರೆ ಶವ ಆಗುತ್ತದೆ. ಶರಣರ ಬಸವ ಮಂಟಪದ ಮಹಾಮನೆಯು ಗ್ರಾಮೀಣ ಭಾಗದಲ್ಲಿ ಹರಡಲಿ, ಅದು ಮಲೇಬೆನ್ನೂರಿಂದ ಆರಂಭವಾಗಲಿ ಎಂದು ಶುಭ ಕೋರಿದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ ಮಾತನಾಡಿ, ವಚನ ಮತ್ತು ಶರಣರ ಭಾವಚಿತ್ರಗಳನ್ನು ಜಿಲ್ಲಾದ್ಯಂತ ಮನೆ ಮನೆಗಳಿಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.

ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲೋಕೇಶ್ ಮಾತನಾಡಿ. ಇಂಥ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚು ಭಾಗವಹಿಸಲು ಹಿರಿಯ ಪೋಷಕರು ಗಮನಹರಿಸಿ ಎಂದು ಸಲಹೆ ನೀಡಿದರು.

ಷಣ್ಮುಖಪ್ಪ ಸಾಲಿ, ಶಂಬುಲಿಂಗಪ್ಪ ಅವರು ಲಿಂಗಪೂಜೆ ನಿಯಮ ಹಾಗೂ ಗುರುಲಿಂಗ ಜಂಗಮ ಉಪದೇಶ ನೀಡಿದರು. ವಿವಿಧ ಘಟಕಗಳ ಅಧ್ಯಕ್ಷರಾದ ನ್ಯಾಮತಿ ಮಹೇಶ್ವರಪ್ಪ, ಹೊನ್ನಾಳಿ ವರದರಾಜ್, ಶಿವಾಜಿ ಪಾಟೀಲ್, ಕಡ್ಲೆಬಾಳು ಪ್ರಕಾಶ್, ಚಂದ್ರಯ್ಯ ಸ್ವಾಮಿ, ವೈ.ನಾರೇಶಪ್ಪ, ಅನುಸೂಯಮ್ಮ, ಕವಿತಾ, ಪೂರ್ಣಿಮಾ, ಮಮತಾ, ಸದಾಶಿವ, ಬಿ.ಬಸವರಾಜ್, ಸದಾನಂದ ಹಾಗೂ ಜಿಲ್ಲೆಯ ನೂರಾರು ಶರಣರು ಇದ್ದರು.

ವಿವಿಧ ಕ್ಷೇತ್ರದ ಆಶಾ ಕಾರ್ಯಕರ್ತೆ ಸುಮಾ, ನಿವೃತ್ತ ಶಿಕ್ಷಕರಾದ ಚಿಕ್ಕಪ್ಪ, ರಾಮರಾಯ, ಪುರಸಭಾ ಸದಸ್ಯ ಸಾಬಿರ್‌ ಅಲಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಅವರನ್ನು ಬಸವ ಬಳಗದಿಂದ ಗೌರವಿಸಲಾಯಿತು. ಬೆಳಗ್ಗೆ ಐವತ್ತು ಶರಣ/ಶರಣೆಯರಿಗೆ ಇಷ್ಟಲಿಂಗ ಪೂಜೆ ನಡೆಯಿತು. ಅಕ್ಕನ ಬಳಗದ ಶರಣೆಯರು ವಚನ ಗೀತೆ ಹಾಡಿದರು.

- - - -ಚಿತ್ರ-೨: ವಿವಿಧ ಕ್ಷೇತ್ರದ ಸಮಾಜ ಸೇವಕರನ್ನು ಬಸವ ಬಳಗದಿಂದ ಗೌರವಿಸಲಾಯಿತು.

Share this article