ಭಾರತ ಜನಗಣತಿ-2027 ಸಮೀಕ್ಷೆಗೆ ಸಿದ್ಧರಾಗಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Feb 26, 2026, 01:45 AM IST
ಕ್ಯಾಪ್ಷನ25ಕೆಡಿವಿಜಿ31 ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಭಾರತದ ಜನಗಣತಿ ಮೊದಲ ಹಂತದ ಕ್ಷೇತ್ರ ಕಾರ್ಯಚರಣೆ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಏ.16ದ ಮೇ 15ರವರೆಗೆ 30 ದಿನಗಳ ಕಾಲ ಭಾರತದ ಜನಗಣತಿ- 2027ರ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- ಮೊದಲ ಹಂತದ ಕ್ಷೇತ್ರ ಕಾರ್ಯಾಚರಣೆ ಅಧಿಕಾರಿಗಳೊಂದಿಗೆ ಸಭೆ । ಗೊಂದಲಗಳಿಗೆ ಅವಕಾಶ ನೀಡದಂತೆ ಸೂಚನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಏ.16ದ ಮೇ 15ರವರೆಗೆ 30 ದಿನಗಳ ಕಾಲ ಭಾರತದ ಜನಗಣತಿ- 2027ರ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಭಾರತದ ಜನಗಣತಿ 2027ರ ಮೊದಲ ಹಂತದ ಕ್ಷೇತ್ರ ಕಾರ್ಯಾಚರಣೆ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತದ ಜನಗಣತಿ 2027 ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಮೀಕ್ಷೆಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ತಾಂತ್ರಿಕ ಗೊಂದಲ ಪರಿಹಾರ:

ಸಮೀಕ್ಷೆ ಗಣತಿದಾರರು ತಮಗೆ ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳು ಗಣತಿದಾರರಿಗೆ ತರಬೇತಿ ನೀಡಬೇಕು. ಸಮೀಕ್ಷೆಯ ಗುಣಮಟ್ಟ ಕಾಪಾಡಿಕೊಳ್ಳಲು ಉತ್ತಮ ಸಾಮರ್ಥ್ಯವುಳ್ಳವರನ್ನು ಮಾತ್ರ ಗಣತಿದಾರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಈ ಹಿಂದೆ ಸಮೀಕ್ಷೆ ಸಂದರ್ಭದಲ್ಲಿ ಕಂಡುಬಂದ ತಾಂತ್ರಿಕ ತೊಂದರೆಗಳು ಮತ್ತು ಗೊಂದಲಗಳನ್ನು ಪರಿಹರಿಸಲಾಗಿದೆ. ಈ ಬಾರಿ ಸಮೀಕ್ಷೆಯನ್ನು ಯಾವುದೇ ದೋಷವಿಲ್ಲದೇ ನಡೆಸಲು ಆದ್ಯತೆ ನೀಡಲಾಗಿದೆ ಎಂದರು.

ಲೋಪದೋಷಕ್ಕೆ ಆಸ್ಪದ ಬೇಡ:

ಯಾವುದೇ ಕಾರಣಕ್ಕೂ ಸಮೀಕ್ಷೆ ಸಂದರ್ಭದಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳದಂತೆ ಸೂಚಿಸಲಾಗಿದೆ. ಒಂದು ವೇಳೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದರೆ, ನೇರವಾಗಿ ಬಿಇಒಗಳು ಮತ್ತು ತಾಲೂಕುಮಟ್ಟದ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಈ ಸಮೀಕ್ಷೆಯು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿಯಾಗಲಿದ್ದು, ಸಿಬ್ಬಂದಿ ಯಾವುದೇ ಲೋಪದೋಷಗಳಿಲ್ಲದೆ ಸಮೀಕ್ಷೆ ನಡೆಸಬೇಕೆಂದು ತಿಳಿಸಿದರು.

ವಾಟ್ಸಪ್‌ ಗ್ರೂಪ್ ರಚಿಸಿ:

ತಹಸೀಲ್ದಾರ್, ತಾಲೂಕುಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಬಿ.ಸಿ.ಎಂ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಆಪ್ ಗ್ರೂಪ್ ರಚಿಸಬೇಕು. ವರ್ಗಾವಣೆ ಆಗಿರುವವರು ಅಥವಾ ನಿವೃತ್ತರಾಗಿರುವವರ ಜಾಗಕ್ಕೆ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅನಾರೋಗ್ಯಪೀಡಿತರು ಅಥವಾ ಗರ್ಭಿಣಿಯರು, ಹಾಲುಣಿಸುವ ತಾಯಂದಿರನ್ನು ಕೆಲಸಕ್ಕೆ ನಿಯೋಜಿಸಬಾರದು. ಡ್ರಾಪ್ ಲೆವೆಲ್ 1% ಕ್ಕಿಂತ ಕಡಿಮೆ ಇರಬೇಕು. ಈ ನಿಟ್ಟಿನಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಣುಕಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನೀಲಾ, ಡಿಡಿಪಿಐ ಕೊಟ್ರೇಶ್, ಜನಗಣತಿ ನೋಡಲ್ ಅಧಿಕಾರಿ ವಿವೇಕ್ ಹಾಗೂ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಆನ್ ಲೈನ್ ಮೂಲಕ ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಎಕ್ಸ್‌ಎಲ್‌ ಶೀಟ್‌ನಲ್ಲಿ ಮಾಹಿತಿ ಸಿದ್ಧವಿರಲಿ ತರಬೇತಿಯು ಮಾ.11 ರವರೆಗೂ ನಡೆಯಲಿದೆ. ಕ್ಷೇತ್ರ ಅಧಿಕಾರಿಗಳಿಗೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದೊಳಗೆ ತರಬೇತಿ ನೀಡಬೇಕು. ಮಾರ್ಚ್ 4ರೊಳಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಬೇಕು. ಮಾನವ ಸಂಪನ್ಮೂಲದ ಗುಣಮಟ್ಟ ಬಹಳ ಮುಖ್ಯ. ಯಾರು ಆರ್ಥಿಕ ಸರ್ವೆ ಮಾಡಿದರೋ ಅವರನ್ನೇ ನೇಮಿಸಿಕೊಳ್ಳುವುದು ಅನುಕೂಲಕರ. ಪ್ರತಿ ಬ್ಲಾಕ್‌ನಲ್ಲಿ ಕನಿಷ್ಠ ಇಬ್ಬರು ಎಣಿಕೆದಾರರನ್ನು ನೇಮಿಸಬೇಕು. ಮನೆ ಪಟ್ಟಿ ಮಾಡುವಾಗ ಸರಿಯಾಗಿ ಮ್ಯಾಪಿಂಗ್ ಮಾಡಬೇಕು. ಈ ಮಾಹಿತಿಯನ್ನು ಎಕ್ಸೆಲ್ ಶೀಟ್‌ನಲ್ಲಿ ಸಿದ್ಧವಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

- - -

-25ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಭಾರತದ ಜನಗಣತಿ ಮೊದಲ ಹಂತದ ಕ್ಷೇತ್ರ ಕಾರ್ಯಾಚರಣೆ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ.ಮಾದೇಗೌಡರು ಶಿಕ್ಷಣ ಸಂಸ್ಥೆ ಕಟ್ಟದಿದ್ದರೆ ಲಕ್ಷಾಂತರ ಮಂದಿ ಶಿಕ್ಷಣ ವಂಚಿತ: ಡಾ.ಕೆ.ಎಸ್.ಅಮೃತೇಶ್
ಸರ್ಕಾರ ಗುರುರಾಯರ ವರ್ಧಂತಿ ಆಚರಿಸಲಿ: ಆರತಿ ತಿವಾರಿ