ಹೆಡಗಿಮದ್ರಾದಲ್ಲಿ ಜಾತ್ರಾ ಮಹೋತ್ಸವದ ರಥೋತ್ಸವ । ಧರ್ಮಸಿಂಚನ ಸಭೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಧರ್ಮ ರಕ್ಷಣೆಯ ಮಹತ್ಕಾರ್ಯಕ್ಕೆ ಯುವ ಜನಾಂಗ ಕಂಕಣಬದ್ಧರಾಗಬೇಕಿದೆ ಎಂದು ರಾಯಚೂರು ಕಿಲ್ಲಾ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಕರೆ ನೀಡಿದರು.ಹೆಡಗಿಮದ್ರಾ ಗ್ರಾಮದಲ್ಲಿ ನಡೆದ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ಆಯೋಜಿಸಿದ್ದ ಧರ್ಮಸಿಂಚನ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಠಗಳಿಗೆ ಭಕ್ತರೇ ಬಹುದೊಡ್ಡ ಆಸ್ತಿ, ಮಠದ ಒಳಗೆ ಕುಳಿತವರು ಶಾಂತ ಶಿವಯೋಗಿಗಳಾದರೆ, ಹೊರಗಡೆ ಇದ್ದವರು ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು. ಅಲ್ಲದೆ, ಮಾತನಾಡುವ ನಾನೂ ಸಹ ಶಾಂತಮಲ್ಲ ಶಿವಾಚಾರ್ಯರು. ಹೀಗಾಗಿ ಇಲ್ಲೇ ತ್ರಿವೇಣಿ ಸಂಗಮವಾಗಿದ್ದು, ಮುಂದಿನ ದಿನಗಳಗಳಲ್ಲಿ ಈ ಜಾತ್ರೆಯೂ ಸಹ ಕುಂಭಮೇಳದಂತೆ ಕಂಗೊಳಿಸಲಿದೆ ಎಂದು ತಿಳಿಸಿದರು.ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಮಾತನಾಡಿ, ಮಠದ ಶ್ರೀಗಳು ಧಾರ್ಮಿಕ ಕಾರ್ಯಗಳ ಜತೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮುಂದಿನ ವರ್ಷ ಈ ಮಠದಲ್ಲಿ ನೂತನ ಕಲ್ಯಾಣ ಮಂಟಪ ಉದ್ಘಾಟನೆ ಜತೆಗೆ ದೇವಸ್ಥಾನದ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಜಾತ್ರೆ, ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ. ಪವಾಡ ಪುರುಷ ಶ್ರೀ ಶಾಂತ ಶಿವಯೋಗಿ ಸ್ವಾಮಿಗಳ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದರು. ಶ್ರೀಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ರೈತ ಬೆಳೆದ ಬೆಳೆಗೆ ಇಂದು ವೈಜ್ಞಾನಿಕ ದರ ಸಿಗುತ್ತಿಲ್ಲ ಎಂಬ ಕೊರಗು ನಮಗೆ ಸದಾಕಾಲ ಕಾಡುತ್ತಿದೆ. ಕೆಲವರು ನಮ್ಮ ಮಠಕ್ಕೆ ಆಸ್ತಿ ಇಲ್ಲ ಎನ್ನುತ್ತಾರೆ. ಆದರೆ, ಗ್ರಾಮದ ಭಕ್ತರು ಬೆಳೆದ ಬೆಳೆಗಳು ಮಠದ ಆವರಣದಲ್ಲಿ ತಂದಿಡುತ್ತಾರೆ. ಅವರ ಬೆಳೆ ನಾನು ರಕ್ಷಣೆ ಮಾಡಿದರೆ, ನಮ್ಮ ಮಠ ಭಕ್ತರು ರಕ್ಷಿಸುತ್ತಿದ್ದಾರೆಂದು ಎಂದು ಹೇಳಿದರು. ಪ್ರಮುಖರಾದ ನಾಗರತ್ನ ಕುಪ್ಪಿ, ಬಸ್ಸುಗೌಡ ಬಿಳ್ಹಾರ, ಚೆನ್ನಪಗೌಡ ಮೋಸಂಬಿ, ಕವಿತಾ ಮಾಲಿಪಾಟೀಲ್ ಮಾತನಾಡಿದರು.ಈ ವೇಳೆ ರಾಮರಡ್ಡಿ ತಂಗಡಗಿ, ಎಚ್. ಕುಮಾರಪ್ಪ, ಬಾವರಾಜ ಚಂಡರಕಿ, ಭೀಮನಗೌಡ ಕ್ಯಾತನಾಳ, ಮಲ್ಲನಗೌಡ ಹಳಿಮನಿ, ಬಸವಂತರಡ್ಡಿ ಕಾರಡ್ಡಿ, ವೆಂಕಟರಡ್ಡಿ ಪಾಟೀಲ್, ರಾಜುಗೌಡ ಚಾಮನಾಳ, ಪಿಡಿಒ ಶಿವಕುಮಾರ, ನೀಲಕಂಠ ಶಹಾಪುರಕರ್ ಇದ್ದರು. ಗಿರೀಶ ಪಾಟೀಲ್ ಸ್ವಾಗತಿಸಿದರು. ಅಮರಯ್ಯಾ ಸ್ವಾಮಿ ನಿರೂಪಿಸಿದರು. ಪಾಟೀಲ್ ಕಲಾತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು.
=====ಬಾಕ್ಸ್=====- ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ
ಹೆಡಗಿಮದ್ರಾದಲ್ಲಿ ಶಾಂತ ಶಿವಯೋಗಿಗಳ ರಥೋತ್ಸವ ಸಂಭ್ರಮದಿಂದ ಜರುಗಿತು. ಸಂಜೆ 7ಕ್ಕೆ ರಥಕ್ಕೆ ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು 5 ಪ್ರದಕ್ಷಿಣೆ ಹಾಕಿದರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಯಚೂರು ಕಿಲ್ಲಾ ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಶಿವಮೂರ್ತಿ ಶಿವಾಚಾರ್ಯರು, ರೇವಣಸಿದ್ದ ಚಿರಂತೇಶ್ವರ ಶಿವಾಚಾರ್ಯರು ಹಾಗೂ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು. ಜಾತ್ರೆ ನಿಮಿತ್ತ ಶ್ರೀಮಠದ ಆವರಣ ಭಕ್ತರಿಂದ ಗಿಜಿಗುಡುತ್ತಿತ್ತು. ಸಾವಿರಾರು ಭಕ್ತ ಸಮೋಹದ ಮಧ್ಯೆ ನಡೆದ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಶಾಂತಶಿವಯೋಗಿ ಮಹಾರಾಜಕೀ ಜೈ ಎಂಬ ಜೈ ಘೋಷಗಳು ಮೊಳಗಿದವು. ಸಂಸ್ಕೃತಿಕ ಹಾಗೂ ಸಾಮಾಜಿಕ ನಾಟಕಗಳು ಪ್ರದರ್ಶನಗೊಂಡವರು.----ಮದ್ದು ಸುಡುವ ಪ್ರದರ್ಶನ : ಪ್ರತಿವರ್ಷ ಸೊಲ್ಲಾಪುರ ಮೂಲದ ಭಕ್ತರು ಮದ್ದು ಸುಡುವ ಪ್ರದರ್ಶನ ನಡೆಸುವುದು ಕರ‍್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು. ರಥೋತ್ಸವಕ್ಕೂ ಮುನ್ನ, ಮಠದ ಆವರಣದಲ್ಲಿ ಮದ್ದು ಸುಡಲಾಗುತ್ತದೆ. ಆಕಾಶ ಬುಟ್ಟಿಯ ಆಕೃತಿಯಲ್ಲಿ ದೀಪವನ್ನಿಟ್ಟು ನಭಕ್ಕೆ ಹಾರಿಸಲಾಗುತ್ತದೆ.
ಜನ ಹೈರಾಣ: ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದ ಕಾರಣ ಸನ್ನತಿ-ಯಾದಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ಭಕ್ತರು ಹೈರಾಣಾಗುವಂತಾಯಿತು. ಲಾರಿ, ಬಸ್, ಟ್ರ‍್ಯಾಕ್ಟರ್ ಹಾಗೂ ಅಸಂಖ್ಯ ಕಾರುಗಳು ರಸ್ತೆಯಲ್ಲಿ ನಿಲ್ಲಿಸಿದ ಕಾರಣ ರಥೋತ್ಸವ ಮುಗಿದ ಬಳಿಕ ಒಂದು ಗಂಟೆಗಳ ಕಾಲ ಪೊಲೀಸರು ಹರ ಸಾಹಸ ಪಡುವಂತಾಯಿತು.-
22ವೈಡಿಆರ್12 : ಹೆಡಗಿಮದ್ರಾ ಗ್ರಾಮದಲ್ಲಿ ಜರುಗಿದ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ಆಯೋಜಿಸಿದ್ದ ಧರ್ಮಸಿಂಚನ ಸಭೆ ನಡೆಯಿತು.-
22ವೈಡಿಆರ್13 : ಹೆಡಗಿಮದ್ರಾ ಗ್ರಾಮದಲ್ಲಿ ಜರುಗಿದ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.