ಮಕ್ಕಳಿಗೆ ಅನಾರೋಗ್ಯವಾದ ಸಂದರ್ಭದಲ್ಲಿ ಘಡಿವಡಿಕಿ ಮಹಾಲಕ್ಷ್ಮೀಗೆ ಹರಕೆ ಹೊರುವ ಪದ್ಧತಿ ಬಹು ವರ್ಷಗಳಿಂದ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.
ಎಂ.ಪ್ರಹ್ಲಾದ್
ಕನಕಗಿರಿ: ತಾಲೂಕಿನ ಘಡಿವಡಿಕಿ ಗ್ರಾಮದ ಆರಾಧ್ಯ ದೇವಿ ಮಹಾಲಕ್ಷ್ಮೀ ಜಾತ್ರೆ ಸಂದರ್ಭದಲ್ಲಿ ನಡೆಯುವ ರಥದ ಮೇಲಿಂದ ಮಕ್ಕಳನ್ನು ಕೆಳಕ್ಕೆ ಎಸೆಯುವ ಸಂಪ್ರದಾಯ ಮುಂದುವರಿದಿದ್ದು, ನೆರೆದಿದ್ದ ಭಕ್ತರು ವಿಸ್ಮಯಗೊಂಡರು.
ಮಕ್ಕಳಿಗೆ ಅನಾರೋಗ್ಯವಾದ ಸಂದರ್ಭದಲ್ಲಿ ಘಡಿವಡಿಕಿ ಮಹಾಲಕ್ಷ್ಮೀಗೆ ಹರಕೆ ಹೊರುವ ಪದ್ಧತಿ ಬಹು ವರ್ಷಗಳಿಂದ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಹರಕೆ ಹೊತ್ತ ಬಳಿಕ ಮಗುವಿಗೆ ಆರೋಗ್ಯ ಚೇತರಿಸುತ್ತದೆ ಎಂಬ ನಂಬಿಕೆ ಇದೆ. ಆ ರೀತಿ ಹರಕೆ ಹೊತ್ತ ಮಗುವನ್ನು ಜಾತ್ರೆಯ ಸಂದರ್ಭದಲ್ಲಿ ರಥದಿಂದ ಕೆಳಕ್ಕೆ ಎಸೆಯುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ರೀತಿ ಹರಕೆ ಹೊತ್ತ ಸಾವಿರಾರು ಮಕ್ಕಳು ಬದುಕುಳಿದಿವೆ. ರಥದಿದ ಕೆಳಕ್ಕೆ ಎಸೆದರೂ ಏನೂ ಆಗೊಲ್ಲ ಎಂದು ಗ್ರಾಮದ ಪ್ರಮುಖರು ಹೇಳುತ್ತಾರೆ.
ಜಾತ್ರೆಯಲ್ಲಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಎರಡು ರಥಗಳನ್ನು ಎಳೆದರು. ಮಕ್ಕಳನ್ನು ರಥದ ಮೇಲಿಂದ ಎಸೆಯುವ ಸಂಪ್ರದಾಯ ಪುರುಷರ ರಥೋತ್ಸವದಲ್ಲಿ ಮಾತ್ರ ಈ ಸನ್ನಿವೇಶ ಕಂಡು ಬಂದಿತು.
ತಲೆತಲಾಂತರದಿಂದ ಬಂದ ಪದ್ಧತಿ:
ಬಹಳ ವರ್ಷಗಳ ನಂತರ ಜನಿಸಿದ ಮಕ್ಕಳನ್ನು ಹಾಗೂ ಮಕ್ಕಳಾಗದೇ ಇದ್ದಾಗ ಮಹಾಲಕ್ಷ್ಮೀಗೆ ಮಗುವಿನ ಪಾಲಕರು ಹರಕೆ ಹೊತ್ತುಕೊಳ್ಳುವ ಸಂಪ್ರದಾಯ ಹಲವು ವರ್ಷಗಳಿಂದ ರೂಢಿಯಲ್ಲಿದೆ. ಇಂದಿಗೂ ದೇವಿಗೆ ಹರಕೆ ಹೊತ್ತ ಪಾಲಕರು ತಮ್ಮ ಮಕ್ಕಳನ್ನು ಜಾತ್ರಾ ಸಮಯದಲ್ಲಿ ನಡೆಯುವ ರಥೋತ್ಸವ ಚಾಲನೆ ದೊರೆಯುವ ಮುಂಚೆಯೇ ಈ ಹರಕೆ ತೀರಿಸುತ್ತಾರೆ. ಅಧಿದೇವತೆ ಮಹಾಲಕ್ಷ್ಮೀಯ ಕಂಬಳಿಯನ್ನು ರಥದ ಮುಂಭಾಗದಲ್ಲಿ ಹಾಸಲಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ರಥದ ಮೇಲ್ಭಾಗಕ್ಕೆ ಕೊಟ್ಟು ಮಹಾಲಕ್ಷ್ಮೀ ಆಶೀರ್ವದಿಸಲಾಗುತ್ತದೆ. ಹೀಗೆ ಮೇಲಿಂದ ಕೆಳಕ್ಕೆ ಬೀಳುವ ಮಕ್ಕಳನ್ನು ಭಕ್ತರು ರಕ್ಷಣೆ ಮಾಡಿ ಮರಳಿ ಪಾಲಕರ ಕೈಗೆ ತಲುಪಿಸುವ ಪದ್ಧತಿ ನಡೆದುಬಂದಿದೆ. ಇಲ್ಲಿವರೆಗೂ ಯಾವುದೇ ಅವಾಂತರಗಳು ನಡೆದಿಲ್ಲ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ದೋಷ ಪರಿಹಾರ, ಆರೋಗ್ಯ ಸಮಸ್ಯೆ, ಮಕ್ಕಳಾಗದೇ ಇರುವುದು, ಹಲವು ವರ್ಷಗಳ ನಂತರ ಮಕ್ಕಳಾಗುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಭಕ್ತರಿಗೆ ಮಹಾಲಕ್ಷ್ಮೀಯೇ ಬೆಳಕಾಗಿದ್ದಾಳೆ. ಎಲ್ಲ ಸಮಸ್ಯೆಗಳಿಂದ ಮುಕ್ತರಾಗಲು ಮಕ್ಕಳನ್ನು ಲಕ್ಷ್ಮೀ ಮೂರ್ತಿಗೆ ನಮಿಸಿ ಕೆಳಕ್ಕೆ ಬಿಡುವುದು ನಮ್ಮ ನಂಬಿಕೆ. ಈ ಸಂಪ್ರದಾಯದಿಂದ ಎಲ್ಲರಿಗೂ ಒಳ್ಳೆಯದೇ ಆಗಿದೆ. ಕೆಟ್ಟದ್ದಾಗಿಲ್ಲ, ಆಗುವುದೂ ಇಲ್ಲ ಎನ್ನುತ್ತಾರೆ ರಥದ ಮೇಲಿದ್ದ ಭಕ್ತ ಶ್ರೀಶೈಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.