ಮಹಾನಗರದಲ್ಲಿ ಭರದಿಂದ ಸಾಗಿದೆ ಜಿಐಎಸ್‌ ಸಮೀಕ್ಷೆ!

KannadaprabhaNewsNetwork |  
Published : Jun 11, 2025, 11:19 AM ISTUpdated : Jun 11, 2025, 12:17 PM IST
ಮಹಾನಗರ ಪಾಲಿಕೆ | Kannada Prabha

ಸಾರಾಂಶ

 ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಎಲ್ಲ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುವುದಕ್ಕಾಗಿ ಜಿಐಎಸ್‌ (ಬೌಗೋಳಿಕ ಮಾಹಿತಿ ವ್ಯವಸ್ಥೆ) 3ಡಿ ಮಾಡಲಿಂಗ್‌ ಸಮೀಕ್ಷೆ ಕಾರ್ಯ ಭರದಿಂದ ನಡೆದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಎಲ್ಲ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುವುದಕ್ಕಾಗಿ ಜಿಐಎಸ್‌ (ಬೌಗೋಳಿಕ ಮಾಹಿತಿ ವ್ಯವಸ್ಥೆ) 3ಡಿ ಮಾಡಲಿಂಗ್‌ ಸಮೀಕ್ಷೆ ಕಾರ್ಯ ಭರದಿಂದ ನಡೆದಿದೆ.

ಮಹಾನಗರ ಪಾಲಿಕೆ ₹ 24 ಕೋಟಿ ವೆಚ್ಚದಲ್ಲಿ ಖಾಸಗಿ ಸಂಸ್ಥೆಯಿಂದ ಈ ಸರ್ವೇ ಮಾಡಿಸುತ್ತಿದೆ. ನಗರದ ಸಮಗ್ರ ಜಿಐಎಸ್‌ ಸಮೀಕ್ಷೆ ನಡೆಯುತ್ತಿರುವುದು ದೇಶದಲ್ಲೇ ಪ್ರಥಮ ನಗರ ಹುಬ್ಬಳ್ಳಿ-ಧಾರವಾಡ ಆಗಲಿದೆ.

ರಾಜ್ಯದ ಎರಡನೆಯ ದೊಡ್ಡ ನಗರ ಎಂಬ ಖ್ಯಾತಿ ಹುಬ್ಬಳ್ಳಿ-ಧಾರವಾಡಕ್ಕಿದೆ. ಆದರೆ ತೆರಿಗೆ ಸಂಗ್ರಹದಲ್ಲಿ ಮಾತ್ರ ಯಾವಾಗಲೂ ಹಿಂದೆಯೇ. ಇದಕ್ಕೆ ಮೂಲ ಕಾರಣ ತೆರಿಗೆ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳು ಬಾರದಿರುವುದು. ಅಂದಾಜಿನ ಪ್ರಕಾರ ಮಹಾನಗರ ಪಾಲಿಕೆಯ ವ್ಯಾಪ್ತಿ 3.38 ಲಕ್ಷ ಆಸ್ತಿಗಳು ಬರುತ್ತವೆ. ಕಳೆದ ವರ್ಷ ₹130 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಹಾಗೆ ನೋಡಿದರೆ ಆಸ್ತಿಗಳ ಸಂಖ್ಯೆ ವಿಪರೀತವಾಗಿದೆ. ಅವುಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ಸೇರಿಸುವುದಕ್ಕಾಗಿ ಇದೀಗ ಮಹಾನಗರ ಪಾಲಿಕೆ ಜಿಐಎಸ್‌ ಸಮೀಕ್ಷೆಗೆ ಮೊರೆ ಹೋಗಿದೆ.

ಏನಿದು ಜಿಐಎಸ್‌?:  ಜಿಎಸ್‌ಎಸ್‌ ಸಮೀಕ್ಷೆ (Geographic Information System) ಎಂದರೆ ಬೌಗೋಳಿಕವಾಗಿ ಸಮಗ್ರ ಮಾಹಿತಿ ಸಂಗ್ರಹಿಸಿಡುವ ವ್ಯವಸ್ಥೆ. ₹24 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಮುಂಬೈ ಮೂಲದ ಜೆನೆಸಿಸ್ ಇಂಟರ್‌ನ್ಯಾಷನಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಈ ಸಮೀಕ್ಷೆಯ ಜವಾಬ್ದಾರಿ ಹೊತ್ತಿದೆ.

ಈಗಾಗಲೇ ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದೆ. ಬರೋಬ್ಬರಿ 10 ದಿನಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಇದೀಗ ಅದರ ಡೇಟಾ ಪ್ರೋಸೆಸಿಂಗ್‌ ಕೆಲಸ ನಡೆದಿದೆ.

ಇನ್ನು ಆನ್‌ ರೋಡ್‌ ಸಮೀಕ್ಷೆ ನಡೆಯುತ್ತಿದೆ. ಸ್ಕಾರ್ಫಿಯೋ ವಾಹನ ಹಾಗೂ ದ್ವಿಚಕ್ರವಾಹನದ ಮೂಲಕ ಸಮೀಕ್ಷೆ ನಡೆಯುತ್ತಿದೆ. ಸ್ಕಾರ್ಫಿಯೋ ವಾಹನ ತೆರಳದ ಜಾಗೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂದಿಗೊಂದಿಗಳಲ್ಲಿ ತೆರಳಿ ಕ್ಯಾಮೆರಾದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 700 ಕಿಮೀ ಸಮೀಕ್ಷೆ ನಡೆಸಲಾಗಿದ್ದು, ಇನ್ನೂ 2500 ಕಿಮೀ ಸಮೀಕ್ಷೆ ನಡೆಸುವುದು ಬಾಕಿ ಉಳಿದಿದೆ. ಆನ್‌ ರೋಡ್‌ ಸಮೀಕ್ಷೆ ಪೂರ್ಣಗೊಳ್ಳಲು ಒಂದೂವರೆ ತಿಂಗಳು ಬೇಕಾಗುತ್ತದೆ.

ಬಳಿಕ ಡೇಟಾ ಪ್ರೋಸಿಸಿಂಗ್‌, ಬೇಸ್‌ ಮ್ಯಾಪ್‌ ಕ್ರಿಯೆಷನ್‌ ಮಾಡಬೇಕಾಗುತ್ತಿದೆ. ಬಳಿಕ ಡೋರ್‌ ಟು ಡೋರ್‌ ಸರ್ವೇ ನಡೆಸಲಾಗುತ್ತಿದೆ. ತದ ನಂತರ ಎಲ್ಲವನ್ನು ಸೇರಿಸಿ ಡಿಜಿಟಲ್‌ ಎಲೆವೇಶನ್‌ ಮಾಡಲ್‌ ಕ್ರಿಯೆಟ್‌ ಆಗುತ್ತಿದೆ. ಆಗ 3ಡಿ ಮಾಡಲ್‌ ಕ್ರಿಯೆಟ್‌ ಆದ ಬಳಿಕ ಸಮೀಕ್ಷೆ ಪೂರ್ಣಗೊಂಡಂತಾಗುತ್ತದೆ. ಈ ಎಲ್ಲವೂ ಮುಗಿಯಬೇಕೆಂದರೆ ಕನಿಷ್ಠ 15 ತಿಂಗಳು ಹಿಡಿಯುತ್ತದೆ.

ಲಾಭವೇನು? : ತೆರಿಗೆ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳು ಇಲ್ಲದಿರುವುದರಿಂದ ಅವುಗಳ ತೆರಿಗೆ ಪಾವತಿಸಲು ಆಗುತ್ತಿಲ್ಲ. ವಸೂಲಿ ಮಾಡುವುದು ಕಷ್ಟಕರವಾಗುತ್ತದೆ. ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ₹400 ಕೋಟಿವರೆಗೂ ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಪಾಲಿಕೆ ತೆರಿಗೆ ಸಂಗ್ರಹ ಎರಡುವರೆ ಪಟ್ಟು ಹೆಚ್ಚಾಗುತ್ತದೆ.

₹30 ಕೋಟಿ ಇನ್ಸೆಂಟಿವ್‌ : ಹಾಗೆ ನೋಡಿದರೆ ದೇಶದ ವಿವಿಧೆಡೆ ಅಲ್ಲಲ್ಲಿ ಜಿಐಎಸ್‌ ಸಮೀಕ್ಷೆ ನಡೆಸಲಾಗಿದೆ. ಆದರೆ ಅವೆಲ್ಲವೂ ಅಲ್ಪಸ್ವಲ್ಪ ನಡೆಸಿದ ಜಿಐಎಸ್‌ ಸಮೀಕ್ಷೆಯಾಗಿವೆ. ಸಮಗ್ರ ನಗರವನ್ನು ಜಿಐಎಸ್‌ ಮೂಲಕ ಸಮೀಕ್ಷೆ ನಡೆಸುತ್ತಿರುವುದು ದೇಶದಲ್ಲೇ ಮೊದಲು. ಹೀಗಾಗಿ ಸಮೀಕ್ಷೆ ಮುಗಿದರೆ ಕೇಂದ್ರ ಸರ್ಕಾರದಿಂದ ₹30 ಕೋಟಿ ಇನ್ಸೆಂಟಿವ್‌ ಕೂಡ ಪಾಲಿಕೆಗೆ ಬರಲಿದೆ ಎಂಬುದು ಗಮನಾರ್ಹ ಸಂಗತಿ.

ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿಗಳ ಜಿಐಎಸ್‌ ಸಮೀಕ್ಷೆ ನಡೆಯುತ್ತಿರುವುದಂತೂ ಸತ್ಯ. ಆದರೆ ಇದು ಎಷ್ಟರ ಮಟ್ಟಿಗೆ ತೆರಿಗೆ ಸಂಗ್ರಹಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜಿಐಎಸ್‌ ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದೆ. ಆನ್‌ ರೋಡ್‌ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಳ್ಳಲು 15 ತಿಂಗಳು ಬೇಕಾಗುತ್ತದೆ. ಸಮಗ್ರ ಮಹಾನಗರದ ಜಿಐಎಸ್‌ ಸಮೀಕ್ಷೆ ನಡೆಸುತ್ತಿರುವುದು ದೇಶದಲ್ಲಿ ಮೊದಲು. ಹೀಗಾಗಿ ಕೇಂದ್ರದಿಂದ ₹30 ಕೋಟಿ ಇನ್ಸೆಟಿವ್‌ ಬರಲಿದೆ ಎಂದು ಹು-ಧಾ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ವಿಜಯಕುಮಾರ ಹೇಳಿದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ