ಕುರುಗೋಡು: ಕೇವಲ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಬಿ.ನಾಗೇಂದ್ರನ ರಾಜೀನಾಮೆಗೆ ಮಾತ್ರ ಪಾದಯಾತ್ರೆ ನಡೆಸುತ್ತಿಲ್ಲ. ಹಗರಣದ ಹಣ ನಿಗಮಕ್ಕೆ ಮರಳಿಸಬೇಕು. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ಹಣದ ಲೆಕ್ಕ ನೀಡಬೇಕು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಪುನರ್ ಚಾಲನೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಾನು ಸೇರಿದಂತೆ ಶ್ರೀರಾಮುಲು, ಕರುಣಾಕರ ರೆಡ್ಡಿ ಮೂವರು ಮಂತ್ರಿಗಳಾಗಿದ್ದಾಗ ಯಾವುದೇ ಹಗರಣಗಳಲ್ಲಿ ಸಿಲುಕಿರಲಿಲ್ಲ. ನೀವು ಒಂದು ಬಾರಿ ಮಂತ್ರಿಯಾಗಿ ₹187ಕೋಟಿ ದಲಿತರ ಹಣ ಕೊಳ್ಳೆ ಹೊಡೆದಿದ್ದೀಯಾ ಎಂದು ಬಿ.ನಾಗೇಂದ್ರ ಮೇಲೆ ಹರಿಹಾಯ್ದರು.
ಹಣ ಕೊಳ್ಳೆ ಹೊಡೆಯುವಾಗ ನೆನಪಾಗದ ದಲಿತರ ಮೇಲಿನ ಪ್ರೀತಿ ಮಂತ್ರಿ ಪದವಿ ಕಳೆದುಕೊಂಡ ನಂತರ ನೆನಪಾಗಿದೆ. ಇವನನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ನಾನು ಹೊರಗಡೆ ಇದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಸ್.ಎಂ. ಕೃಷ್ಣ, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ಕೊಂಡಯ್ಯ ಸೋನಿಯಾ ಗಾಂಧಿ ಅವರಿಗೆ ದೂರು ನೀಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಮೇಲೆ ಒತ್ತಡ ತಂದು ನನ್ನ ಮೇಲೆ ದೂರು ದಾಖಲಿಸಿ ಬಂಧಿಸಿದರು. ಅಕ್ರಮ ಗಣಿ ಆರೋಪದಿಂದ ನಿರ್ದೋಷಿಯಾಗಿ ಹೊರಗಡೆ ಬಂದಿದ್ದೇನೆ. ಗಂಗಾವತಿ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ನಾನು ಚಲಾವಣೆಯಲ್ಲಿರುವ ನಾಣ್ಯ ಎಂದು ಸಮರ್ಥಿಸಿಕೊಂಡರು.
ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರಿದ್ದರೂ ಕ್ಷೇತ್ರದ ರೈತರಿಗೆ ನೀರು ಬಿಡಿಸದ ಶಾಸಕ ಜೆ.ಎನ್. ಗಣೇಶ್ ಕಾಲುವೆಯ ಮೇಲೆ ತೊರಿಕೆಗೆ ಓಡಾಡುತ್ತಿದ್ದಾನೆ. ನಿಗಮದ ನಿಯಮದಂತೆ ಕಾಲುವೆಗಳಿಗೆ ನೀರು ಹರಿಸಿದರೂ ನಾನೇ ಹೆಚ್ಚು ನೀರು ಬಿಡಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಮೋಕಾ, ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಎ.ತಿಮ್ಮಾರೆಡ್ಡಿ, ಗುತ್ತಿಗನುರು ವಿರುಪಕ್ಷಿಗೌಡ, ದಮ್ಮೂರು ಶೇಖರ್, ಜೆ. ಸೋಮಶೇಖರ ಗೌಡ ಮತ್ತು ಹನುಮಂತಪ್ಪ ಇದ್ದರು.