ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಅವರು, ಯುವ ನಾಯಕರಾಗಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಾಗರ ಕಾಂಗ್ರೆಸ್ ಪರವಾಗಿ ಮನವಿ ಮಾಡುತ್ತೇವೆ ಎಂದರು.
ಬೇಳೂರು ಗೋಪಾಲಕೃಷ್ಣ ಅವರು ಉತ್ತಮ ಸಂಘಟಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ದನೆಯಾಗುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಶಿಷ್ಯರಾಗಿರುವ ಅವರು, ಯುವಜನರ ನೆಚ್ಚಿನ ನಾಯಕರಾಗಿದ್ದಾರೆ. ಅವರನ್ನು ಸಚಿವರನ್ನಾಗಿ ಮಾಡಿದರೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ನಾಯಕರುಗಳೂ ಸೇರಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಹೈಕಮಾಂಡ್ ನಾಯಕರು ಗೋಪಾಲಕೃಷ್ಣ ಅವರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅವರು ಮಾತನಾಡಿ, ಮಧುಬಂಗಾರಪ್ಪ ಅವರೂ ನಮ್ಮ ನಾಯಕರು. ಮೂರು ವರ್ಷ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈಗ ಬೇಳೂರು ಗೋಪಾಲಕೃಷ್ಣ ಅವರಿಗೆ ಅವಕಾಶ ನೀಡಬೇಕೆಂಬುದು ನಮ್ಮ ಮನವಿಯಾಗಿದೆ. ಬೇಳೂರು ಯುವಜನರ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಪಕ್ಷದ ನಾಯಕರನ್ನು ತಾಲೂಕು ಕಾಂಗ್ರೆಸ್‌ನಿಂದ ಭೇಟಿ ಮಾಡಿ ಮನವಿ ಮಾಡುತ್ತೇವೆ. ಜೂ.11ರಂದು ಸಾಗರದ ಮಾರಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಂದು ಪಕ್ಷದ ನಾಯಕರ ಗಮನ ಸೆಳೆಯಲು ಹಕ್ಕೊತ್ತಾಯದ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಶಕ್ತಿ ಕೇಂದ್ರವಾದ ಶಿವಮೊಗ್ಗದಲ್ಲಿ ಪಕ್ಷ ಬೆಳವಣಿಗೆ ದೃಷ್ಠಿಯಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವುದು ಉತ್ತಮವಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಯುವಜನರಲ್ಲಿ ಹೊಸ ಚೈತನ್ಯ ಬಂದಂತಾಗುತ್ತದೆ. ಮುಖ್ಯಮಂತ್ರಿ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಬೇಕು.
ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಶಾಸಕರು ನಷ್ಟದಲ್ಲಿದ್ದ ನಿಗಮವನ್ನು ಲಾಭಕ್ಕೆ ತಂದಿದ್ದಾರೆ. ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಎಲ್ಲ ವರ್ಗಗಳಿಗೆ ನ್ಯಾಯ ಕೊಟ್ಟಂತಾಗುತ್ತದೆ. ಪಕ್ಷದ ನಾಯಕರು ನಮ್ಮ ಮನವಿ ಪುರಸ್ಕರಿಸಬೇಕು.