ಹಾವೇರಿ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಗುರು-ಶಿಷ್ಯರ ಸಂಬಂಧ ಅನ್ಯೋನ್ಯವಾಗಿರುವ ಜತೆಗೆ ಶಿಸ್ತು ಕಲಿಸಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳಿಗೆ ತಯಾರಿಸುವಲ್ಲಿ ಗುರುಶಕ್ತಿ ದೊಡ್ಡದು ಎಂದರು.
ಶಿಕ್ಷಕರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಹಂತ-ಹಂತವಾಗಿ ಈಡೇರಿಸಲಾಗುವುದು. ಶಾಲೆಗಳ ಆಸ್ತಿ ಸಂರಕ್ಷಣೆಗೆ ಇ-ಆಸ್ತಿ, ಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯ ವಿಲೇವಾರಿ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು. ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಕಾಂಪೌಂಡ್, ಶೌಚಾಲಯ, ಭೋಜನಾಲಯ ವ್ಯವಸ್ಥೆಗೆ ಎನ್‌ಆರ್‌ಇಜಿ ಅಡಿ ಅವಕಾಶವಿದ್ದು, ತಾಲೂಕು ಪಂಚಾಯಿತಿ ಸಭೆಯಲ್ಲಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಸೂಚಿಸಲಾಗುವುದು. ಶಿಕ್ಷಕರು ತಮ್ಮ ಶಾಲೆ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು, ಮೂಲಭೂತ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ಸಾರ್ವಜನಿಕರು ಶಿಕ್ಷಕರ ದಿನ ಆಚರಿಸುವಂತಾಗಬೇಕು. ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಆದರ್ಶ ಮೌಲ್ಯ ಹಾಗೂ ಶಿಸ್ತು ಸೇರಿದಂತೆ ಉತ್ತಮ ಗುಣಗಳನ್ನು ಕಲಿಸಬೇಕು ಎಂದು ಹೇಳಿದರು.
ಪಾಶ್ಚಿಮಾತ್ಯ ಅನುಕರಣೆಯಿಂದ ಯುವಜನತೆ ದಾರಿ ತಪ್ಪುತ್ತಿರುವುದು ವಿಷಾದದ ಸಂಗತಿ. ಯುವ ಸಮೂಹವನ್ನು ಕ್ರಿಯಾಶೀಲ ಹಾಗೂ ಸೃಜನಾತ್ಮಕರನ್ನಾಗಿ ಮಾಡುವ ಮೂಲಕ ಶಕ್ತಿಯುತ ರಾಷ್ಟ್ರಕಟ್ಟಬೇಕಾಗಿದೆ. ಸದೃಢ ರಾಷ್ಟ್ರ ಕಟ್ಟುವುದು ನಾವು ನೀಡುವ ಶಿಕ್ಷಣದ ಮೇಲೆ ನಿಂತಿದೆ. ಈ ದೇಶದ ಆಚಾರ, ವಿಚಾರ, ಸಂಸ್ಕೃತಿ, ರಾಷ್ಟ್ರಾಭಿಮಾನ ಇಂದಿನ ಶಿಕ್ಷಣದಲ್ಲಿ ಬೇಕಾಗಿದೆ ಎಂದರು.
ಜಿಪಂ ಸಿಇಒ ಅಕ್ಷಯ್ ಶ್ರೀಧರ ಮಾತನಾಡಿ, ಸ್ಮಾರ್ಟ್‌ಕ್ಲಾಸ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ ನಡತೆ ಹಾಗೂ ಮೌಲ್ಯಯುತ ಶಿಕ್ಷಣ ತಂತ್ರಜ್ಞಾನದಿಂದ ಆಗದು. ಇದು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳು ಮಣ್ಣು ಇದ್ದ ಹಾಗೆ, ಶಿಕ್ಷಕರು ಅವರಿಗೆ ಆಕಾರ ನೀಡುವ ಕೆಲಸಮಾಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಎ. ಎಣ್ಣಿ, ಡಯಟ್ ಉಪನಿರ್ದೇಶಕ ಗಿರೀಶ ಪದಕಿ, ಬಿಇಒ ಮೌನೇಶ ಬಡಿಗೇರ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ನಿಜಲಿಂಗಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಶಿಕ್ಷಕ ನಾಗರಾಜ ನಡುವಿನಮಠ ಇದ್ದರು.