ಬರ ನಿರ್ವಹಣೆ ಮತ್ತು ಕುಡಿಯುವ ನೀರು ಪೂರೈಕೆ ಪ್ರಗತಿ ಪರಿಶೀಲನಾ ಸಭೆ
ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯತ್ಯಯವಾಗಬಾರದು. ಸಮಸ್ಯಾತ್ಮಕ ಗ್ರಾಮಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕುಡಿಯುವ ನೀರು ಪೂರೈಸಲು ಮೊದಲ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಪೂರೈಕೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಬೇಕು. ಒಂದು ವೇಳೆ ಸರ್ಕಾರಿ ಬೋರ್‌ವೆಲ್‌ಗಳಲ್ಲಿ ಇಳುವರಿ ಕಡಿಮೆಯಾಗಿದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಸರಬರಾಜು ಮಾಡಬೇಕು. ಜೂನ್ 30 ರವರೆಗೂ ಕುಡಿಯುವ ನೀರಿನ ತೊಂದರೆ ಬರದಂತೆ ಎಚ್ಚರಿಕೆ ಕ್ರಮ ವಹಿಸಬೇಕು. ಅಗತ್ಯ ಪರಿಸ್ಥಿತಿಗಳಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಪೂರೈಕೆಗೆ ಅವಕಾಶವಿದ್ದು, ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಅನುಸಾರ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ. ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ ಆಗಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.
ನಗರ ಪ್ರದೇಶಗಳಲ್ಲಿ ನೀರಿನ ಆಕರಗಳ ಸಂಗ್ರಹಣೆ ಸಾಮರ್ಥ್ಯ, ಪರ್ಯಾಯ ನೀರಿನ ಮೂಲಗಳನ್ನು ಬಳಸಿಕೊಂಡು ಯೋಜನೆ ರೂಪಿಸಬೇಕು. ತುಂಗಭದ್ರಾ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ನಿರ್ದೇಶನವಿದ್ದು, ಇದನ್ನು ಯಾರೂ ಮೀರಬಾರದು, ಕುಡಿಯುವ ನೀರಿನ ಹೊರತಾಗಿ ಬೇರೆ ಉದ್ದೇಶಕ್ಕೆ ನದಿ ನೀರನ್ನು ಬಳಸುವುದು ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾಯ್ದೆಯನ್ವಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಯ ದೂರು ದಾಖಲಿಸಲು ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ದಾಖಲಾಗುವ ದೂರುಗಳನ್ನು ದಾಖಲಿಸಿಕೊಂಡು, ಕೂಡಲೇ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ. ಸೇರಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯಾಧಿಕಾರಿಗಳು, ಪಿಡಿಒಗಳು ಇತರರಿದ್ದರು.