ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಾವೆಲ್ಲರೂ ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಬಿ.ಆರ್.ಸಿ. ಸಮನ್ವಯಾಧಿಕಾರಿ ಗಂಗಾಧರ ಅಣ್ಣೀಗೇರಿ ಹೇಳಿದರು.
ಅವರು ಮಂಗಳವಾರ ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕಾಡಳಿತ ಮುಂಡರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಡರಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್. ಡಂಬಳ ಬಾಲಕಿಯರ ಪ್ರೌಢಶಾಲೆ ಮುಂಡರಗಿ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದ ಅಚ್ಚ ಕನ್ನಡ ಮಾತನಾಡುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ನಮ್ಮ ಮಾತೃಭಾಷೆ ಕನ್ನಡವಾಗಿದ್ದರೂ ಸಹ ಮಕ್ಕಳು ನಿರಗ್ರಳವಾಗಿ ಕನ್ನಡಭಾಷೆ ಮಾತನಾಡುತ್ತಿಲ್ಲ. ನಾವು ಮಾತನಾಡುವ ಪ್ರತಿ ಶಬ್ದಗಳಲ್ಲಿಯೂ ಸಹ ಅನ್ಯ ಭಾಷೆಯ ಪದ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಹೀಗೆ ನಾವು ಬೇರೆ ಭಾಷೆಗಳನ್ನು ಮಾತನಾಡುತ್ತಾ ಹೋದಲ್ಲಿ ಮುಂದೊಂದು ದಿನ 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಬಹುದೊಡ್ಡ ಪೆಟ್ಟು ಬೀಳಬಹುದು. ಆದ್ದರಿಂದ ಕನ್ನಡಿಗರಾದ ನಾವು ಈ ಕನ್ನಡವನ್ನು ನಮ್ಮ ನಿತ್ಯದ ವ್ಯಾಪಾರ, ವಹಿವಟುಗಳಲ್ಲಿ ಹಾಗೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಾಗಿದೆ ಎಂದರು.
ಇಂತಹ ಕನ್ನಡ ಭಾಷೆ ಉಳಿಯಬೇಕಾದರೆ ಇತರೆ ಭಾಷೆಗಳು ನಮಗೆ ಮಾತನಾಡಲು ಬಂದರೂ ಸಹ ನಾವು ಮೊದಲ ಆದ್ಯತೆ ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ನೀಡಬೇಕು. ಅಂದಾಗ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಬಳಸಲು ಅನುಕೂಲವಾಗುತ್ತದೆ.ನಾವು ಮನೆಯಲ್ಲಿ ಮಕ್ಕಳಿಗೆ ನಿತ್ಯ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವುದನ್ನು ತಿಳಿಸಿ ಕೊಡಬೇಕು ಎಂದರು.ಅಚ್ಚ ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ಒಟ್ಟು 12 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾಗರಿಕರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿನುತಾ ಜೋಶಿ ಪ್ರಥಮ ಸ್ಥಾನ ಪಡೆದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ವಿಶ್ರಾಂತ ಪ್ರಾ.ಸಿ.ಎಸ್. ಅರಸನಾಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಕಾವೇರಿ ಬೋಲಾ, ಶಾಲಾ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ, ಪ್ರೌಢ ವಿಭಾಗದ ಬಿ.ಆರ್.ಪಿ. ಹನುಮರಡ್ಡಿ ಇಟಗಿ, ಕೃಷ್ಣ ಸಾಹುಕಾರ್, ಲಿಂಗರಾಜ ದಾವಣಗೆರೆ, ರಮೇಶಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜು ಮುಧೋಳ ಸ್ವಾಗತಿಸಿ ನಿರೂಪಿಸಿದರು.