ಹಗರಿಬೊಮ್ಮನಹಳ್ಳಿ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿರಬೇಕು. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಫಲಿತಾಂಶ ಸದ್ದು ಮಾಡಬೇಕು. ವಿದ್ಯಾರ್ಥಿಗಳ ಸಾಧನೆ ಕಳಪೆಯಾಗಿದ್ದೇ ಆದರೆ ಆಯಾ ಶಾಲೆಯ ಮುಖ್ಯ ಗುರುಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಶಾಸಕ ನೇಮಿರಾಜ್ ನಾಯ್ಕ ಎಚ್ಚರಿಸಿದರು.
ಸರಕಾರಿ ಶಾಲೆಗಳಲ್ಲಿ, ರೈತರು ಮತ್ತು ಬಡಜನರ ಮಕ್ಕಳು ಹೆಚ್ಚಾಗಿ ಓದುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಈ ವರೆಗೂ ಶಿಕ್ಷಕರು ವಿಫಲರಾಗಿದ್ದಾರೆ ಎಂದು ಕಿಡಿ ಕಾರಿದ ಅವರು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಉನ್ನತಿಯ ದೃಷ್ಟಿಯಿಂದ ಎಲ್ಲ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು. ಕ್ರಮ ಜರುಗಿಸುವ ತೂಗುಕತ್ತಿ ನಮ್ಮೆಲ್ಲರ ಮೇಲಿದೆ ಎಂದು ಮೊದಲೇ ಎಚ್ಚರಗೊಂಡರೆ ಸೂಕ್ತ ಎಂದು ಹೇಳಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಮೇಲೆಯೂ ಚಾಟಿ ಬೀಸಿದ ಶಾಸಕರು, ನಿಮ್ಮ ವೇತನಕ್ಕೆ ತಕ್ಕಂತೆ ಬೋಧನೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರಲ್ಲದೇ ಬೋಧನೆ ನಡೆಯದಿದ್ದರೆ ಖಾಸಗಿ ಶಾಲೆಗಳ ಅನುಮತಿಯ ರದ್ಧತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ವೇತನ ತಡೆ ಹಿಡಿಯುವ ಕ್ರಮಕ್ಕೆ ಆಸ್ಪದ ನೀಡಬೇಡಿ ಎಂದು ಹರಿಹಾಯ್ದರು.ತಾಪಂ ಇಒ ವಿಶ್ವನಾಥ್, ಪ್ರಭಾರಿ ಬಿಇಒ ಪ್ರಭಾಕರ್, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಗಳಾದ ರಾಜಶೇಖರ್, ಎಚ್.ಎಂ.ಹುಲಿಬಂಡಿ, ವಿಶೇಷ ಪರಿವೀಕ್ಷಕ ಸುರೇಶ್, ಅಕ್ಷರ ದಾಸೋಹದ ಯೋಜನಾಧಿಕಾರಿ ರಾಜಕುಮಾರ್, ಉಪ ತಹಸೀಲ್ದಾರ್ ಶಿವಕುಮಾರ್ ಗೌಡ, ನೌಕರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ, ಶಿಕ್ಷಣ ಸಂಯೋಜಕ ಶಿವಲಿಂಗ ಸ್ವಾಮಿ, ಗುರುಬಸವರಾಜ ಮತ್ತು ತಾಲೂಕಿನ ಎಲ್ಲ ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಗರಿಬೊಮ್ಮನಹಳ್ಳಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ನೇಮಿರಾಜ್ ನಾಯ್ಕ ಮಾತನಾಡಿದರು.