ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ ನೀಡಿದ ಸಂಸದ ಸಂಗಣ್ಣ
ಚಿತ್ರದುರ್ಗದಲ್ಲಿ ನಿರ್ಮಿಸುವ ತೋಟಗಾರಿಕೆ ಕ್ಲಸ್ಟರ್ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಸೇರಿಸಬೇಕು ಹಾಗೂ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರನ್ನು ಭೇಟಿ ಮಾಡಿದ ಸಂಸದ ಕರಡಿ ಸಂಗಣ್ಣ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ದೇಶದಾದ್ಯಂತ ತೋಟಗಾರಿಕೆ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.ಯೋಜನೆಯ ಭಾಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಲಸ್ಟರ್ ನಿರ್ಮಾಣ ಅಂತಿಮಗೊಳಿಸಲಾಗಿದೆ ಎಂದರು.ಈ ನಿಟ್ಟಿನಲ್ಲಿ ದಾಳಿಂಬೆ ರಫ್ತುದಾರರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ.ಚರ್ಚೆಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಮಾರುಕಟ್ಟೆ, ಮೂಲಸೌಕರ್ಯಗಳ ಕೊರತೆ ಎದುರಿಸಲಾಗುತ್ತಿದೆ. ಗುಣಮಟ್ಟದ ದಾಳಿಂಬೆ ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಿದೆ ಎಂದು ತಿಳಿಸಿದರು.