ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭೋವಿ ಗುರುಪೀಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ದೀಕ್ಷಾ ರಜತ ಮಹೋತ್ಸವದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇಂದು ಶ್ರೀಮಂತರಿಗೆ ಸುಲಭವಾಗಿ ಕ್ರಷರ್ ಸಿಗುತ್ತಿದೆ. ಕಲ್ಲು ವಡ್ಡರಿಗೆ ಸಮಸ್ಯೆ ಆಗಿದೆ. ಕುಲಕಸಬು ಮಾಡುವವರಿಗೆ ಅವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯವೆಂದರು.
ಭೋವಿ ಸಮುದಾಯ ರಟ್ಟೆ ನಂಬಿ ಬದುಕುತ್ತಿದ್ದು ಕಾಯಕ ಮತ್ತು ಶ್ರಮಿಕ ವರ್ಗವಾಗಿದೆ. ಅಕ್ಷರದಿಂದ ವಂಚಿತರಾದ ಈ ಸಮುದಾಯ ಮೇಲೆತ್ತಲು ತಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಶಿಕ್ಷಣದ ತಳಹದಿ ಮೇಲೆ ಸಂಘಟನೆ ಮಾಡಲು ಉದ್ದೇಶಿಸಲಾಗಿದೆ. ಭೋವಿ ಸಮಾಜದ ಯುವಕರು ಶಿಕ್ಷಣವಂತರಾಗಿ ಅಧಿಕಾರಿ ವರ್ಗದ ಸಂಖ್ಯೆ ಹೆಚ್ಚಬೇಕು. ಶಾಲೆಯಲ್ಲಿ ಶಿಕ್ಷಕ, ಆಸ್ಪತ್ರೆಯಲ್ಲಿ ವೈದ್ಯ, ಕೋರ್ಟ್‌ನಲ್ಲಿ ವಕೀಲ, ನಿರ್ಮಾಣ ಇಲಾಖೆಯಲ್ಲಿ ಇಂಜಿನಿಯರ್, ಭೋವಿಗಳು ಬಂದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ. ಸ್ವಯಂ ಚಾಕರಿಕೆ ಮಾಡಿಕೊಂಡು ಬಂದ ಸಮುದಾಯ ನಮ್ಮದಾಗಿದ್ದು ಗ್ರಾಪಂ ನಿಂದ ಸಂಸದರಾಗುವ ತನಕ ಸಮಾಜ ಸಂಘಟಿತವಾಗಿದೆ. ಕಾರ್ಯಕ್ರಮದಲ್ಲಿ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನ ಸೇರಿರುವುದು ಭೋವಿು ಸಮಾಜ ಸದೃಢವಾಗಿರುವುದರ ಸಂಕೇತ. ಇದು ಗರ್ವ ಪಡುವ ವಿಚಾರವೆಂದರು.ಸಂಘಟನೆ ಗಟ್ಟಿಯಾದ ನಂತರವೇ ಭೋವಿ ಅಭಿವೃದ್ಧಿ ನಿಗಮ, ಕೆಪಿಎಸ್‌ಸಿ ಸದಸ್ಯತ್ವ, ಆಯಕಟ್ಟಿನ ಜಾಗದಲ್ಲಿ ಅಧಿಕಾರಿಗಳ ಸರ್ಕಾರ ನಿಯೋಜನೆ ಮಾಡಿತು. ಧಾರ್ಮಿಕತೆ ತಳಹದಿ ಮೇಲೆ ಸಮಾಜದ ಅಭಿವೃದ್ಧಿ ತೊಡಗಿದ್ದೇನೆ. ಈ ಸಮುದಾಯಕ್ಕೆ ಮೂಢನಂಬಿಕೆ, ಕಂದಾಚಾರ ಶಾಪವಾಗಿತ್ತು. ಇಂದು ಎಷ್ಟೋ ಗ್ರಾಮಗಳ ಮೌಢ್ಯರಹಿತ, ದುಶ್ಚಟ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದೇವೆ. ಇದು ಗುರು ಪೀಠದ ಗುರಿಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದರೆ ಸಮುದಾಯದ ಅಭ್ಯುದಯ ಸಾಧ್ಯವಾಗುತ್ತದೆ ಎಂದು ಶ್ರೀಗಳು ಹೇಳಿದರು.
ದೀಕ್ಷಾ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಮೈಸೂರು ಮಹಾರಾಜರು ಮೊದಲು ಭೋವಿಗಳಿಗೆ ಮೀಸಲಾತಿ ಕೊಟ್ಟರು. ನಂತರ ಡಿ.ದೇವರಾಜ ಅರಸುರವರು ಮೀಸಲಾತಿ ನೀಡಿದರು. ಕೆಪಿಸಿಸಿ ಮೆಂಬರ್, ವಿಧಾನಪರಿಷತ್‍ಗೆ ನಾಮನಿರ್ದೇಶನ, ನಮ್ಮ ಜನಾಂಗದವರು ಸಂಸದರಾಗಬೇಕೆಂಬ ಬೇಡಿಕೆಯಿಟ್ಟಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲವನ್ನು ಈಡೇರಿಸಿದ್ದಾರೆ. ನಿಮ್ಮ ಜೊತೆ ನಾವಿರುತ್ತೇವೆ. ನಮ್ಮ ಮಠಕ್ಕೆ ವಿಶೇಷ ಅನುದಾನ ಕೊಡಿ. ಭೋವಿ ಅಭಿವೃದ್ಧಿ ನಿಗಮಕ್ಕೆ ಐದು ನೂರು ಕೋಟಿ ರು ಮೀಸಲಿಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿಗಳು ಕೆರೆ ಕಟ್ಟೆ ಕಟ್ಟುವುದು ಕಲ್ಲು ಹೊಡೆಯುವುದು ಕುಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ದುಶ್ಚಟಗಳಿಂದ ದೂರವಿರುವಂತೆ ಸ್ವಾಮೀಜಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಹದಿನಾಲ್ಕನೆ ವಯಸ್ಸಿನಲ್ಲಿಯೇ ಸ್ವಾಮೀಜಿಯಾಗಿ ದೀಕ್ಷೆ ಪಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ 25 ವರ್ಷಗಳನ್ನು ಕಳೆದಿದ್ದಾರೆ. ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕುಲ ಕಸುಬಿಗೆ ಕೊಡಲಿ ಪೆಟ್ಟು ಬಿದ್ದಿದೆ. ಕಲ್ಲು ಹೊಡೆಯಲು ಅವಕಾಶ ಮಾಡಿಕೊಡಿ. ಅರಣ್ಯ ಇಲಾಖೆಯವರ ಕಿರುಕುಳ ತಪ್ಪಿಸಿ ಭೋವಿ ಅಭಿವೃದ್ಧಿ ನಿಗಮಕ್ಕೆ ಐದು ನೂರು ಕೋಟಿ ರು. ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.