ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಮಕ್ಕಳಿಗೆ ನೀಡಿ: ನಂದಿನಿ ಜಯರಾಮು ಸಲಹೆ

KannadaprabhaNewsNetwork |  
Published : Aug 12, 2024, 01:33 AM IST
10ಕೆಎಂಎನ್ ಡಿ14 | Kannada Prabha

ಸಾರಾಂಶ

ಭಾರತದಲ್ಲಿ ಮೌಢ್ಯ ಮತ್ತು ಬಡತನವನ್ನು ಪರಸ್ಪರ ತಳಕು ಹಾಕಿಕೊಂಡಿವೆ. ನಮ್ಮಲ್ಲಿನ ಮೂಢನಂಬಿಕೆಗಳನ್ನು ತೊರೆದರೆ ನಮ್ಮ ಬದುಕು ಸ್ವರ್ಗವಾಗಲಿದೆ. ಅಮೃತಕ್ಕೆ ಸಮಾನವಾದ ಹಾಲನ್ನು ದೇವರು- ಧರ್ಮದ ಹೆಸರಲ್ಲಿ ಹಾಳುಗೆಡುವುದು ಶ್ರೇಷ್ಠವಲ್ಲ. ಹಾಲನ್ನು ಮಕ್ಕಳು, ಬಡವರು, ರೋಗಿಗಳು ಹಾಗೂ ವೃದ್ಧರಿಗೆ ನೀಡಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌಷ್ಠಿಕಾಂಶಯುಕ್ತ ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಮಕ್ಕಳಿಗೆ ನೀಡಬೇಕು ಎಂದು ರೈತ ಮಹಿಳಾ ಹೋರಾಟಗಾರ್ತಿ ನಂದಿನಿ ಜಯರಾಮ್ ಸಲಹೆ ನೀಡಿದರು.

ಪಟ್ಟಣದ ಟಿ.ಬಿ.ಬಡಾವಣೆಯ ದಕ್ಷಿಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗರ ಪಂಚಮಿ ಅಂಗವಾಗಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಬಸವ ಪಂಚಮಿ ಆಚರಣೆ ಹಾಗೂ ಮಕ್ಕಳಿಗೆ ಪೌಷ್ಟಿಕಯುಕ್ತವಾದ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ ಮೌಢ್ಯ ಮತ್ತು ಬಡತನವನ್ನು ಪರಸ್ಪರ ತಳಕು ಹಾಕಿಕೊಂಡಿವೆ. ನಮ್ಮಲ್ಲಿನ ಮೂಢನಂಬಿಕೆಗಳನ್ನು ತೊರೆದರೆ ನಮ್ಮ ಬದುಕು ಸ್ವರ್ಗವಾಗಲಿದೆ. ಅಮೃತಕ್ಕೆ ಸಮಾನವಾದ ಹಾಲನ್ನು ದೇವರು- ಧರ್ಮದ ಹೆಸರಲ್ಲಿ ಹಾಳುಗೆಡುವುದು ಶ್ರೇಷ್ಠವಲ್ಲ. ಹಾಲನ್ನು ಮಕ್ಕಳು, ಬಡವರು, ರೋಗಿಗಳು ಹಾಗೂ ವೃದ್ಧರಿಗೆ ನೀಡಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ ಎಂದರು.

ತಾಲೂಕು ಬಿಎಸ್ಪಿ ಮಾಜಿ ಅಧ್ಯಕ್ಷ ಬಸ್ತಿ ಪ್ರದೀಪ್ ಮಾತನಾಡಿ, ಕಲ್ಲು ನಾಗನಿಗೆ ಹಾಲುಣಿಸಿ ಮಣ್ಣು ಪಾಲು ಮಾಡುವ ಬದಲು ಅದನ್ನು ಮಕ್ಕಳಿಗೆ ನೀಡುವ ಬಸವ ಪಂಚಮಿಯಾಗಿ ನಾವು ಆಚರಿಸಬೇಕು. ಹಾಲು ಹಾವಿನ ಆಹಾರವಲ್ಲ. ವೈಜ್ಞಾನಿಕ ಅಂಶವನ್ನು ನಾವು ಅರಿಯಬೇಕು ಎಂದು ತಿಳಿಸಿದರು.

ವೈಜ್ಞಾನಿಕ ಚಿಂತನೆ ಅಡಿಯಲ್ಲೇ ಧರ್ಮ- ದೇವರ ಆಚರಣೆ ಮಾಡಬೇಕು. ಬಸವಣ್ಣನವರು ನೀಡಿದ ಶರಣರ ಚಿಂತನೆಗಳು ಜಗತ್ತಿನಲ್ಲಿಯೇ ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿವೆ. ನಾವು ಅದರ ಮಾರ್ಗದಲ್ಲಿ ಸಾಗಿ ಹಸಿದವರಿಗೆ ಅನ್ನ ನೀಡುವ ಸುಸಂಕೃತ ಆಚರಣೆಗಳನ್ನು ಆರಂಭಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಶಾಲೆ ಮುಖ್ಯಶಿಕ್ಷಕ ಸಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ಎಸ್.ಕೆರಮಾ, ಕೆ.ಆರ್.ಮಂಜುಳ, ಸಿ.ವಿ.ಭಾಗ್ಯ, ಬಿ.ಎನ್.ಉಷ, ಕೆ.ಬಿ.ಜ್ಯೋತಿ, ದೇವರಾಜು, ಗಣೇಶ್ ಹೇಮಾಕ್ಷಿ, ಮಂಜುಳ, ಎ.ಕೆ.ಸಹನಾ, ಶ್ವೇತಾ, ಕದಂಬ ಕಾಲೇಜಿನ ಉಪನ್ಯಾಸಕರಾದ ಕರುಣಾನಿಧಿ, ವೇದಿಕೆ ತಾಲೂಕು ಸಂಚಾಲಕ ಪ್ರದೀಪ್, ಜಿಲ್ಲಾ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಬಸ್ತಿಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ