ಪ್ರತಿ ವರ್ಷ ಕೇಂದ್ರ ಸರ್ಕಾರ ಸಾಲ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದೆ. 2025 -26ರಲ್ಲಿ ₹15,68,958 ಕೋಟಿ ಸಾಲ, 2026-27ರಲ್ಲಿ ₹17,20,000 ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದಾರೆ
ಕುಕನೂರು: ಕೇಂದ್ರ ಸರ್ಕಾರದ ಬಜೆಟಿನಲ್ಲಿ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಲ್ಲ. ಬದಲಾಗಿ ವಿತ್ತೀಯ ಕೊರತೆ ಹೆಚ್ಚಳ ಹಾಗೂ ಕೇಂದ್ರ ಸರ್ಕಾರ ಸಾಲದ ಹೊರೆ ಎದ್ದು ಕಾಣುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್ ಕುರಿತು ಮಾತನಾಡಿದ ಅವರು, ಕೇಂದ್ರದ ಬಜೆಟ್‌ನಲ್ಲಿ ದೇಶದ ಮುಂದಿನ ಭವಿಷ್ಯದ ಬಗ್ಗೆ ಯೋಜನೆಗಳಿಲ್ಲ, ಯಾವುದೇ ಸ್ಪಷ್ಟ ಯೋಜನೆ ದೇಶಕ್ಕೆ ನೀಡಿಲ್ಲ. ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ, ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿಲ್ಲ. ಮೂರು ಏಮ್ಸ್ ಕೇಂದ್ರ ಸ್ಥಾಪನೆ ಮಾಡುತ್ತಿದ್ದು, ಮೂರು ಉತ್ತರ ಭಾರತದಲ್ಲಿ ಸ್ಥಾಪನೆ ಆಗುತ್ತಿವೆ. ಕರ್ನಾಟಕದ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿರುವುದಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಹಣ ನೀಡಿರುವುದಿಲ್ಲ. ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆ ನೀಡಿಲ್ಲ, ಅನ್ಯಾಯ ಮಾಡಿದ್ದಾರೆ. ಹೈಸ್ಪೀಡ್ ರೈಲ್ ಕಾರಿಡಾರ್ ಅನ್ನು ಬೆಂಗಳೂರು-ಮುಂಬೈಗೆ ಮಾಡಬೇಕಾಗಿತ್ತು, ಇದರಿಂದ ಬೆಂಗಳೂರು ಮುಂಬೈನಲ್ಲಿ ವ್ಯಾಪಾರ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು ಎಂದು ಹೇಳಿದ್ದಾರೆ.ಸಾಲದ ಹೊರೆ:ಪ್ರತಿ ವರ್ಷ ಕೇಂದ್ರ ಸರ್ಕಾರ ಸಾಲ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದೆ. 2025 -26ರಲ್ಲಿ ₹15,68,958 ಕೋಟಿ ಸಾಲ, 2026-27ರಲ್ಲಿ ₹17,20,000 ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಸಾಲದ ಪ್ರಮಾಣ ದೇಶದ ಜಿಡಿಪಿಯ ಶೇ. 56ರಷ್ಟಿದೆ. ಕೇಂದ್ರ ಸರ್ಕಾರ ತಾನೇ ಮಾಡಿದ ಕಾನೂನನ್ನು ಸತತವಾಗಿ ಉಲ್ಲಂಘಿಸುತ್ತಿದೆ ಎಂದು ಹೇಳಿದರು.
ವಿತ್ತೀಯ ಕೊರತೆ:ವಿತ್ತೀಯ ಕೊರತೆ ಪ್ರತಿ ವರ್ಷ ಜಾಸ್ತಿ ಆಗುತ್ತಿದೆ. 2025- 26ರಲ್ಲಿ ₹1558492 ಕೋಟಿಗಳಾಗಿದ್ದು, 2026 -27ಕ್ಕೆ ₹1695678 ಕೋಟಿಗಳಾಗಿದೆ. ಇದರಿಂದ ಸ್ಪಷ್ಟವಾಗಿ ವಿತ್ತೀಯ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ ಎಂದಿದ್ದಾರೆ.