‘ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿ ಆದ ನಂತರ ಬ್ಲೂ ಫಿಲ್ಮ್‌ ಮಾಡಿಸುವುದು, ಪೋಸ್ಟರ್‌ ಅಂಟಿಸುವುದು ಬಿಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಇನ್ನೂ ಹಳೇ ಚಾಳಿ ಬಿಟ್ಟಿಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ

 ಬೆಂಗಳೂರು : ‘ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿ ಆದ ನಂತರ ಬ್ಲೂ ಫಿಲ್ಮ್‌ ಮಾಡಿಸುವುದು, ಪೋಸ್ಟರ್‌ ಅಂಟಿಸುವುದು ಬಿಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಇನ್ನೂ ಹಳೇ ಚಾಳಿ ಬಿಟ್ಟಿಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಿಡದಿ ರೈತರ ಪರ ಹೋರಾಟ ನಡೆಸುತ್ತಿರುವುದಕ್ಕೆ ಕಾಂಗ್ರೆಸ್‌ನವರು ಪೋಸ್ಟರ್‌ಗಳನ್ನು ಅಂಟಿಸಿ ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ಮನುಷ್ಯ ಅಲ್ಲ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತದೆ ಎಂದು ಹರಿಹಾಯ್ದರು.

ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ. ಅದನ್ನೇ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಪೋಸ್ಟರ್ ಅಂಟಿಸಿ ‌ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪತ್ನಿಯ ಚಿತ್ರವನ್ನು ಪೋಸ್ಟರ್‌ನಲ್ಲಿ ಹಾಕಿದ್ದಾರೆ. ಹಾಗೆ ನೋಡಿದರೆ ಈ ವ್ಯಕ್ತಿ ಬಗ್ಗೆ ನಾವು ಎಷ್ಟು ಪೋಸ್ಟರ್‌ಗಳನ್ನು ಅಂಟಿಸಬೇಕು ಎಂದು ಅವರು ಪ್ರಶ್ನಿಸಿದರು.

ನೂರು ಎಕರೆ ಅಂತ ಪೋಸ್ಟರ್‌ನಲ್ಲಿ ಬರೆದು ನನ್ನ ಮತ್ತು ನನ್ನ ಪುತ್ರ ನಿಖಿಲ್ ಫೋಟೋಗಳನ್ನು ಹಾಕಿದ್ದಾರೆ. ನನ್ನದೂ ಅಂತ 46 ಎಕರೆ ಭೂಮಿ ಇದೆ. 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿಸಿದ ಜಮೀನು ಅದು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನೂ ಇಲ್ಲ. ನೂರು ಎಕರೆ ಎಲ್ಲಿದೆ ಎಂದು ಅವರು ತೋರಿಸಲಿ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಭೂಮಿ ಖರೀದಿಸಿದ್ದಾರೆ. ಅದಕ್ಕೆ ಇನ್ನೂ ಯಾವನೋ ಒಬ್ಬನ ಫೋಟೋ ಹಾಕಿ ಅಂಟಿಸಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲೂಟಿ:

ನಿಮಗೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಗೊತ್ತಿರಬಹುದು. ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲೂಟಿ ಹೊಡೆದ ಕೆಟ್ಟ ಚರಿತ್ರೆ ಈ ವ್ಯಕ್ತಿಯದು. ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಈ ವ್ಯಕ್ತಿ ಇವತ್ತು ತನ್ನ ಚೇಲಾಗಳಿಂದ ಪೋಸ್ಟರ್ ಹಾಕಿಸಿದ್ದಾರೆ. ನನ್ನ ಯೋಗ್ಯತೆ ಏನು? ಈ ವ್ಯಕ್ತಿಯ ಯೋಗ್ಯತೆ ಏನು ಎಂದು ಜನಕ್ಕೂ ಗೊತ್ತಿದೆ ಎಂದು ಹೇಳಿದರು.

ಇದು ಸಿಎಂ ಡಿಕೆಶಿ ವಿಕೃತಿ:

ಆರಂಭದಿಂದಲೂ ಇವರ ಹಿನ್ನೆಲೆ ಇದೇ ಆಗಿದೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ ಅವರ ವಿರುದ್ಧವೂ ಪೋಸ್ಟರ್ ಹಾಕಿಸಿದ್ದಾರೆ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಲಿ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳದ್ದು ನಡೆದು ಹೋಯಿತು. ನನ್ನನ್ನು ಹನಿಟ್ರ್ಯಾಪ್ ಮಾಡಿಸಲು ಸಂಚು ರೂಪಿಸಿದ್ದರು ಎಂದು ಸಚಿವರೊಬ್ಬರು ಆರೋಪಿಸಿದ್ದರು. ವಿಧಾನಸಭೆ ಕಲಾಪದಲ್ಲಿ ನಡೆದಿದ್ದನ್ನು ಇಡೀ ರಾಜ್ಯವೇ ನೋಡಿತು. ಕೊನೆಗೆ ಸತ್ಯ ಹೇಳುತ್ತೇನೆ ಎಂದ ಆ ಸಚಿವನ ಬಾಯಿ ಮುಚ್ಚಿಸಿದರು. ಈಗ ಮುಖ್ಯಮಂತ್ರಿ ಆದರೂ ಹಳೇ ಚಾಳಿ ಬಿಡುವಂತೆ ಕಾಣುತ್ತಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಹೆದರುವ ಪ್ರಶ್ನೆಯೇ ಇಲ್ಲ:

ನನ್ನ ಬದುಕು ತೆರದ ಪುಸ್ತಕ. ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಈ ಪೋಸ್ಟರ್‌ಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಮುಂದುವರಿಯಲಿದೆ. ಬಿಡದಿ ಟೌನ್ ಶಿಪ್ ನನ್ನ ಕಾಲದಲ್ಲಿ ಮಾಡಲು ಹೊರಟಿದ್ದು ನಿಜ. ಜನ ವಿರೋಧಿಸಿದ ಹಿನ್ನೆಲೆಯಲ್ಲಿ ಆ ಯೋಜನೆಯನ್ನೇ ಕೈಬಿಟ್ಟೆ. ನಾನು ಮಾಡಲೇಬೇಕು ಎಂದು ಹೊರಟ್ಟಿದ್ದರೆ, ಎರಡನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದ್ದೆ. ಅಂತಹ ಕೆಲಸ ನಾನು ಮಾಡಲಿಲ್ಲ. ಈಗ ನನ್ನ ಹೆಸರು ಹೇಳಿಕೊಂಡು ಭೂಮಿ ಲಪಟಾಯಿಸಲು ಹೊರಟಿದ್ದಾರೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಮುಖ್ಯಮಂತ್ರಿ ಆಗಿರುವ ವ್ಯಕ್ತಿಗೆ ಒಂದು ಸ್ಟ್ಯಾಂಡರ್ಡ್ ಬೇಡವಾ? ಸ್ಟ್ಯಾಂಡರ್ಡ್ ಇಲ್ಲದ ವ್ಯಕ್ತಿಯ ನಡವಳಿಕೆಯಿಂದಾಗಿ ರಾಜ್ಯ ಯಾವ ದಿಕ್ಕಿಗೆ ಹೋಗಲಿದೆ ಎಂದು ರಾಜ್ಯದ ಜನತೆಯೇ ಆಲೋಚಿಸಬೇಕು.

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ