ಆಯುರ್ವೇದ ಮತ್ತು ಆರೋಗ್ಯ ಕ್ಷೇತ್ರದತ್ತ ಜನರ ಆಸಕ್ತಿ ಹೆಚ್ಚುತ್ತಿದ್ದು, ಬಯೋಫಾರ್ಮಾ ಹಬ್ ಸ್ಥಾಪನೆಗೆ ₹10 ಸಾವಿರ ಕೋಟಿ ಮೀಸಲಿಡಲಾಗಿದೆ. 350ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಮೂಲಕ ಭಾರತವನ್ನು ಔಷಧಿ ತಯಾರಿಕಾ ಹಬ್ ಆಗಿ ರೂಪಿಸುವ ಗುರಿ ಹೊಂದಲಾಗಿದೆ.
ಗದಗ: ದೇಶದ ಆರ್ಥಿಕತೆ ಶೇ. 7ರಷ್ಟು ಪ್ರಗತಿ ದರದಲ್ಲಿ ಬೆಳವಣಿಗೆಯಲ್ಲಿದ್ದು, ವಿಕಸಿತ ಭಾರತದತ್ತ ದೇಶ ಮುನ್ನಡೆಯುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ₹10 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದ್ದು, ದೇಶಾದ್ಯಂತ 200 ಕೈಗಾರಿಕೆ ಹಬ್ ಗಳನ್ನು ಸ್ಥಾಪಿಸಲಾಗಿದೆ.ಆಯುರ್ವೇದ ಮತ್ತು ಆರೋಗ್ಯ ಕ್ಷೇತ್ರದತ್ತ ಜನರ ಆಸಕ್ತಿ ಹೆಚ್ಚುತ್ತಿದ್ದು, ಬಯೋಫಾರ್ಮಾ ಹಬ್ ಸ್ಥಾಪನೆಗೆ ₹10 ಸಾವಿರ ಕೋಟಿ ಮೀಸಲಿಡಲಾಗಿದೆ. 350ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಮೂಲಕ ಭಾರತವನ್ನು ಔಷಧಿ ತಯಾರಿಕಾ ಹಬ್ ಆಗಿ ರೂಪಿಸುವ ಗುರಿ ಹೊಂದಲಾಗಿದೆ.
ಸೆಮಿಕಂಡಕ್ಟರ್ ಯೋಜನೆಯ ಮೂಲಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುತ್ತಿದ್ದು, ವಿರಳ ಲೋಹಗಳ ಕಾರಿಡಾರ್ ಸ್ಥಾಪನೆಗೆ ₹40 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಬಂಡವಾಳ ವೆಚ್ಚವನ್ನು ₹11.4 ಲಕ್ಷ ಕೋಟಿಯಿಂದ ₹12.2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. 20 ಜಲಮಾರ್ಗಗಳ ಅಭಿವೃದ್ಧಿ ಮೂಲಕ ರಫ್ತು ಉತ್ತೇಜನ ದೊರಕಿದ್ದು, 7 ಹೊಸ ಹೈಸ್ಪೀಡ್ ರೈಲು ಮಾರ್ಗಗಳನ್ನು ಘೋಷಿಸಲಾಗಿದೆ. ಪ್ರತಿಯೊಂದು ಜಿಲ್ಲೆಗೆ ಮಹಿಳಾ ಹಾಸ್ಟೆಲ್ ನೀಡಲಾಗಿದ್ದು, ವಿದ್ಯಾ ಆಧರಿತ ಉದ್ಯೋಗ ಸೃಷ್ಟಿಗೆ ವಿಶೇಷ ಸಮಿತಿ ರಚಿಸಲಾಗಿದೆ ಎಂದರು.ನರೇಗಾ ಕುರಿತು ಮಾತನಾಡಿದ ಅವರು, ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಿಂದ ಹಣದ ಲೋಪ ತಪ್ಪಿಸಲಾಗಿದೆ. ಹಿಂದಿನ ದಿನಗಳಲ್ಲಿ ರಾಜಕೀಯ ಪುಢಾರಿಗಳಿಗೆ ಹಣ ತಿನ್ನಲು ಅವಕಾಶ ಇತ್ತು. ಅದೇ ಕೈ ತಪ್ಪಿದ ನೋವಿನಿಂದ ವಿರೋಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಸಿ. ಪಾಟೀಲ ವಾಗ್ದಾಳಿ ನಡೆಸಿದರು.
ಉದ್ಯಮಿ ರಾಯ್ ಸಾವಿನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ರಾಯ್ ಕಾಂಗ್ರೆಸ್ ಪಕ್ಷದ ಫಂಡರ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.