ಅವಕಾಶ ವಂಚಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಪಾಲು ಸಿಗಬೇಕೆಂಬುದರಲ್ಲಿ ನಮ್ಮ ಬದ್ಧತೆ ಇದೆ. ಅವಕಾಶ ವಂಚಿತರಾಗಿ, ಶೋಷಣೆಗೆ ಒಳಗಾದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಡೀ ದೇಶದಲ್ಲೇ ಪರಿಶಿಷ್ಟ ಜಾತಿ-ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ಮೀಸಲಿಟ್ಟು, ಅದನ್ನು ಕಡ್ಡಾಯವಾಗಿ ಖರ್ಚು ಮಾಡಬೇಕೆಂಬ ಕಾನೂನನ್ನು 2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದು, ಅದನ್ನೇ ಇಡೀ ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಹರಿಹರ ತಾ. ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶುಕ್ರವಾರ 26ನೇ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮಿಗಳ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.24 ಹಣವನ್ನು ಕೇಂದ್ರ ಸರ್ಕಾರ ಮೀಸಲು ಇಡಲಿ ನೋಡೋಣ. ಯಾಕೆ ಕೇಂದ್ರ ಸರ್ಕಾರಕ್ಕೆ ಇದನ್ನು ಮಾಡಲು ಆಗಲ್ಲವೇ ಎಂದು ಪ್ರಶ್ನಿಸಿದರು.
ಅವಕಾಶ ವಂಚಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಪಾಲು ಸಿಗಬೇಕೆಂಬುದರಲ್ಲಿ ನಮ್ಮ ಬದ್ಧತೆ ಇದೆ. ಅವಕಾಶ ವಂಚಿತರಾಗಿ, ಶೋಷಣೆಗೆ ಒಳಗಾದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು.
ಮೀಸಲಾತಿ ಭಿಕ್ಷೆಯಲ್ಲ. ಅದು ನಿಮ್ಮ ಹಕ್ಕು ಎಂಬುದನ್ನು ಮರೆಯಬಾರದು. ಸ್ಪಷ್ಟವಾಗಿ ತಿಳಿದುಕೊಳ್ಳಿ. 2013ರಲ್ಲಿ ನಾನು ಸಿಎಂ ಆದಾಗ ಸಂಬಳ ನೀಡುವುದು, ಸಾಲ ಕೊಡುವುದನ್ನು ಬಿಟ್ಟು, ಪರಿಶಿಷ್ಟರಿಗೆ ಜಾತಿ ಸಂಖ್ಯೆಗೆ ಅನುಗುಣವಾಗಿ ಹಣ ಖರ್ಚಾಗಬೇಕೆಂದು ಕಾನೂನು ಮಾಡಿದ್ದು ಸಿದ್ದರಾಮಯ್ಯ ಎಂಬುದನ್ನು ಮರೆಯಬೇಡಿ. ದೇಶದಲ್ಲೇ ಯಾರೂ ಇಂತಹ ಕೆಲಸ ಮಾಡಿರಲಿಲ್ಲ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು ಪರಿಶಿಷ್ಟರಿಗಾಗಿ ಅನುದಾನ ಹೆಚ್ಚಿಸಿ, ಅದನ್ನು ಸಂಪೂರ್ಣ ಬಳಸಬೇಕೆಂಬ ಕಾನೂನು ಮಾಡಿದ್ದರಾ? ಬದಲಾವಣೆ ಬಗ್ಗೆ ಮಾತನಾಡುತ್ತಾರಲ್ಲಾ ಅಂತಹವರಾದರೂ ಮಾಡಿದ್ದರಾ? ಕೇಂದ್ರ ಸರ್ಕಾರವಾದರೂ ಮಾಡಬೇಕಿತ್ತಲ್ಲವೇ? ಯಾಕೆ ಯಾಕೆ ಮಾಡಲಿಲ್ಲ? ವಾಲ್ಮೀಕಿ ಜನಾಂಗ ದೇಶದಲ್ಲಿದೆ.
ಬಾಯಿ ಮಾತಿನಿಂದ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಸಮಾನತೆ ಬಾಯಿ ಮಾತಿನಿಂದ ಸಾಧ್ಯವೇ? ದೇಶದಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ಮೀಸಲಿಡಲು ಇನ್ನಾದರೂ ಕೇಂದ್ರ ಮುಂದಾಗಲಿ ಎಂದು ಆಗ್ರಹಿಸಿದರು.