ಕಾರಟಗಿ: ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜಕ್ಕೆ ನ್ಯಾಯಸಮ್ಮತ ಹಕ್ಕುಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಕುಲಶಾಸ್ತ್ರ ಅಧ್ಯಯನ ವರದಿ ಈ ಕೂಡಲೇ ಜಾರಿಗೆ ತರಬೇಕು ಹಾಗೂ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಸಮಾಜ ಆಗ್ರಹಿಸಿದೆ.
ಉಪ್ಪಾರ ಸಮಾಜ ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿದೆ. ಕಳೆದ ಐದು ದಶಕಗಳಿಂದಲೂ ಕಾಂಗ್ರೆಸ್ ತತ್ವ-ಸಿದ್ಧಾಂತ ನಂಬಿಕೊಂಡು, ಪಕ್ಷದ ನಿಷ್ಠಾವಂತ ಮತದಾರರಾಗಿ ಹಾಗೂ ಕಾರ್ಯಕರ್ತರಾಗಿ ನಿರಂತರವಾಗಿ ಬೆಂಬಲವಾಗಿ ನಿಂತಿದೆ. ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಬಬಲೇಶ್ವರ, ಅರಭಾವಿ, ಚಾಮರಾಜನಗರ, ಕೊಳ್ಳೇಗಾಲ ಹಾಗೂ ನಂಜನಗೂಡು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಸುಮಾರು 30 ರಿಂದ 35 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದ ಮತದಾರರು ಅಭ್ಯರ್ಥಿಗಳ ಗೆಲುವು-ಸೋಲವನ್ನು ನಿರ್ಧರಿಸುವ ಶಕ್ತಿಯಾಗಿದ್ದಾರೆ.
ಇಂತಹ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವುದು ಸರ್ಕಾರ ಮತ್ತು ಪಕ್ಷದ ನೈತಿಕ ಜವಾಬ್ದಾರಿ. ಹೀಗಾಗಿ ರಾಜ್ಯದ ಉಪ್ಪಾರ ಸಮಾಜದ ಏಕೈಕ ಶಾಸಕ ಪುಟ್ಟರಂಗಶೆಟ್ಟಿಗೆ ತಕ್ಷಣವೇ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು, ಕಲ್ಯಾಣ ಕರ್ನಾಟಕ ಭಾಗದ ನಿಷ್ಠಾವಂತ ಕಾರ್ಯಕರ್ತರಿಗೆ ಎಂಎಲ್ಸಿ ಪ್ರಾತಿನಿಧ್ಯ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ದೀರ್ಘಕಾಲದಿಂದ ತಳಮಟ್ಟದಲ್ಲಿ ದುಡಿಯುತ್ತಿರುವ, ಪಕ್ಷದ ತತ್ವಗಳಿಗೆ ಬದ್ಧರಾಗಿರುವ ಹಾಗೂ ಸಮಾಜದ ಪರವಾಗಿ ಹೋರಾಟ ಮಾಡುತ್ತಿರುವ ನಿಷ್ಠಾವಂತ ಕಾರ್ಯಕರ್ತರನ್ನು ಈ ಬಾರಿ ವಿಧಾನ ಪರಿಷತ್‌ಗೆ ಪರಿಗಣಿಸಬೇಕು. ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ರಾಜಕೀಯ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.ವಿಶೇಷವಾಗಿ ಕುಲಶಾಸ್ತ್ರ ಅಧ್ಯಯನ ವರದಿ ತಕ್ಷಣ ಜಾರಿಗೆ ತರಬೇಕು ಉಪ್ಪಾರ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಮಹತ್ವ ಹೊಂದಿರುವ ಕುಲಶಾಸ್ತ್ರ ಅಧ್ಯಯನ ವರದಿ ಹಿಂದುಳಿದ ವರ್ಗಗಳ ಆಯೋಗವು 14-08-2024 ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸುಮಾರು ಎರಡು ವರ್ಷಗಳು ಕಳೆದರೂ ಈ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣವೇ ಈ ವರದಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.