ಕಳೆದ ೩೬ ವರ್ಷಗಳಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಆಳ್ವಿಕೆ ನಡೆಸುತ್ತಿದ್ದು, ಈ ಬಾರಿ ನಮ್ಮ ಪಕ್ಷದ ಉತ್ತಮ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ ಸೋಲು ಮತದಾರರ ನಿರ್ಣಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ತಿಳಿಸಿದರು.
ಯಲ್ಲಾಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಯಾವ ಕಾರಣದಿಂದ ಸೋಲಾಯಿತೆಂಬುದು ನಮಗಿನ್ನೂ ಅರ್ಥವಾಗಿಲ್ಲ. ಮತದಾರರು ಬಯಸಿದಂತೆ ಅವರು ಇಚ್ಛಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದಾರೆಂದು ಭಾವಿಸಬಹುದು. ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಅತ್ಯಂತ ಪರಿಶ್ರಮದಿಂದ ಕಾರ್ಯನಿರ್ವಹಿಸಿದ ಪಕ್ಷದ ಎಲ್ಲ ಸ್ತರದ ಕಾರ್ಯಕರ್ತರ ಶ್ರಮ ಅಭಿನಂದನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ ತಿಳಿಸಿದರು.
ಆ. ೧ರಂದು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನಾ ಸಭೆಯನ್ನು ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿ, ಮಾತನಾಡಿದರು.ಕಳೆದ ೩೬ ವರ್ಷಗಳಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಆಳ್ವಿಕೆ ನಡೆಸುತ್ತಿದ್ದು, ಈ ಬಾರಿ ನಮ್ಮ ಪಕ್ಷದ ಉತ್ತಮ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ ಸೋಲು ಮತದಾರರ ನಿರ್ಣಯವಾಗಿದೆ. ಏನಿದ್ದರೂ ನಮ್ಮ ಪಕ್ಷದ ಸೋಲಿನ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದು, ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಸಂಘಟಿತರಾಗಬೇಕಾಗಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಎದುರಿಸಬೇಕಾದ ಸವಾಲುಗಳ ಕುರಿತು ಸಿದ್ಧತೆ ನಡೆಸಬೇಕಿದೆ ಎಂದರು.ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಚುನಾವಣೆ ನಂತರದ ಕಾರ್ಯಕರ್ತರ ಅಭಿನಂದನಾ ಸಭೆ ನಮ್ಮೆಲ್ಲರ ಆತ್ಮಾವಲೋಕನದ ಸಭೆಯೂ ಆಗಿದೆ. ಒಟ್ಟಾರೆ ಮತದಾರರ ನಿರ್ಣಯಕ್ಕೆ ನಾವು ತಲೆಬಾಗಬೇಕಾದುದು ಅನಿವಾರ್ಯ ಎಂದರು.
ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ಸೇವಾದಳದ ಅಧ್ಯಕ್ಷ ಪ್ರಶಾಂತ ಸಭಾಹಿತ, ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ನೇತ್ರೇಕರ, ನಗರ ಘಟಕಾಧ್ಯಕ್ಷ ರವಿಚಂದ್ರ ನಾಯ್ಕ, ಪ್ರಮುಖರಾದ ಸೂರ್ಯನಾರಾಯಣ ಭಟ್ಟ, ನರಸಿಂಹ ನಾಯ್ಕ, ಶಿರೀಷಪ್ರಭು, ಶ್ರೀಕಾಂತ ಶೆಟ್ಟಿ, ರವಿ ಭಟ್ಟ ಬರಗದ್ದೆ, ಎಂ.ಕೆ. ಭಟ್ಟ ಯಡಳ್ಳಿ, ಎಂ.ಡಿ. ಮುಲ್ಲಾ, ಸರಸ್ವತಿ ಗುನಗಾ, ವಿ.ಎಸ್. ಭಟ್ಟ, ಲಾರೆನ್ಸ್ ಸಿದ್ದಿ ಮತ್ತಿತರ ವಿವಿಧ ಸ್ತರದ ಪ್ರಮುಖರು ವೇದಿಕೆಯಲ್ಲಿದ್ದರು. ಸುಮಾರು ೩೫೦ಕ್ಕೂ ಅಧಿಕ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ತಾಲೂಕಾಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮನಾಥ ಹೆಗಡೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.